ಗುವಾಹಟಿ: ಅಸ್ಸಾಂನ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.ಗೋಮಾಂಸ ಸೇವನೆಯ ಬಗ್ಗೆ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದರೆ 3ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3ರಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು.ಸರ್ಕಾರದ ನಿರ್ಣಯಕ್ಕೆ ವಿಪಕ್ಷಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.ಅಸ್ಸಾಂನಲ್ಲಿ ಗೋಮಾಂಸ ಸೇವನೆ ಕಾನೂನುಬಾಹಿರವಲ್ಲ. ಆದ್ರೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ ರಾಜ್ಯದಲ್ಲಿ ಎಲ್ಲ ರೀತಿಯ ಜಾನುವಾರುಗಳ ಸಾಗಣೆ, ಹತ್ಯೆ, ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುತ್ತದೆ. ನಾವು ಈ ಹಿಂದೆ ಅಸ್ಸಾಂನಲ್ಲಿ ಗೋವುಗಳನ್ನು ರಕ್ಷಿಸುವ ಮಸೂದೆ ಜಾರಿಮಾಡಿ ಯಶಸ್ವಿ ಆಗಿದ್ದೇವೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.ರಾಜ್ಯದ ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸ ನೀಡದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಸಾರ್ವಜನಿಕ ಸಮಾರಂಭಗಳಲ್ಲೂ ದನದ ಮಾಂಸ ಕೊಡಬಾರದು. ಜೊತೆಗೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯ ಅನ್ವಯ ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಸ್ಥಾನ ಅಥವಾ ಸತ್ರ (ವೈಷ್ಣವ ಮಠ)ದ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.