ದ.ಕ ಜಿಲ್ಲಾ ಕುಲಾಲ ಮಾತೃ ಸಂಘದ ಚುನಾವಣೆಯಲ್ಲಿ ಅಕ್ರಮ – ಮರು ಚುನಾವಣೆಗೆ ಸಹಕಾರ ಸಂಘಗಳ ಉಪನಿಬಂಧಕರಿಂದ ಆದೇಶ
ಮಂಗಳೂರು : ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಆಯ್ಕೆಯನ್ನು ಅಸಿಂಧು ಎಂದು ಹೈಕೋರ್ಟ್ ಸೂಚನೆಯ ಮೇರೆಗೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರವರಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿತ್ತು. ಅದರಂತೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಸೂಕ್ತವಾದ ತನಿಖೆ ನಡೆಸಿ ಮರು ಚುನಾವಣೆಗೆ ಆದೇಶಿಸಿ ತೀರ್ಪು ನೀಡಿದ್ದಾರೆ.2024-26ನೇ ಸಾಲಿನ ಕುಲಾಲ ಮಾತೃ ಸಂಘದ ಚುನಾವಣೆಯು ನವೆಂಬರ್ 10ರಂದು ನಡೆದಿದ್ದು, ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ ಸಹಿತ ಕಾರ್ಯಕಾರಿ ಸಮಿತಿಗೆ ಹಲವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಗಿತ್ತು. ಅದರೆ ಇದು ತನಿಖೆಯಲ್ಲಿ ಅಕ್ರಮ ಎಂದು ತಿಳಿದುಬರುತ್ತದೆ. ಈ ಚುನಾವಣೆ ವಿಧಿವತ್ತಾಗಿ ನಡೆದಿಲ್ಲ, ಇಲ್ಲಿ ಚುನಾವಣಾ ಅಧಿಕಾರಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.ಆದ್ದರಿಂದ ಈ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಮಂಗಳೂರಿನ ಪುರುಷೋತ್ತಮ್ ಕುಲಾಲ್, ದಯಾನಂದ ಅಡ್ಯಾರ್ ಮತ್ತು ಇತರ ಹದಿಮೂರು ಸದಸ್ಯರು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಾದ ವಿವಾದಗಳನ್ನು ಆಲಿಸಿ ದ.ಕ ಜಿಲ್ಲಾ ರಿಜಿಸ್ಟರ್ ಅಧಿಕಾರಿಗೆ ಈ ಚುನಾವಣೆಯು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಮತ್ತು ಅಕ್ರಮವಾದುದು ಎಂದು ಘೋಷಿಸಿ ಮುಂದಿನ 45 ದಿನಗಳೊಳಗೆ ಮರು ಚುನಾವಣೆ ನಡೆಸುವಂತೆ ಆದೇಶಿಸಿದೆ.ಕುಲಾಲ ಮಾತೃ ಸಂಘದ ನೂರು ವರ್ಷಗಳ ಇತಿಹಾಸದಲ್ಲಿ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದ್ದು, ಹಿರಿಯರು ಕಷ್ಟಪಟ್ಟು ಬೆಳೆಸಿರುವ ಸಂಘವು ಇತ್ತೀಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿ ನಲುಗುತ್ತಿದೆ.