Home ಕರಾವಳಿ ಯಾವುದೇ ಕಾರಣಕ್ಕೂ ಪಡಿತರ ಚೀಟಿ ರದ್ದಾಗುವುದಿಲ್ಲ- ಆಹಾರ ಸಚಿವ ಮುನಿಯಪ್ಪ ಭರವಸೆ

ಯಾವುದೇ ಕಾರಣಕ್ಕೂ ಪಡಿತರ ಚೀಟಿ ರದ್ದಾಗುವುದಿಲ್ಲ- ಆಹಾರ ಸಚಿವ ಮುನಿಯಪ್ಪ ಭರವಸೆ

0

ಕುಂದಾಪುರ: ಯಾರ ಪಡಿತರ ಚೀಟಿಯೂ ರದ್ದಾಗುವುದಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹೆಚ್ಕೆ ಮುನಿಯಪ್ಪ ಹೇಳಿದ್ದಾರೆ. ಅವರು ಭಾನುವಾರ ಕುಂದಾಪುರ ತಾಲೂಕಿನ ಜನ್ನಾಡಿ ಮತ್ತು ಮಣಿಗೇರಿ ಎಂಬಲ್ಲಿ 14 ಕೊರಗ ಕುಟುಂಬಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನವಾಗಿ ಕಟ್ಟಿಸಿ ಕೊಡಲಾದ ಮನೆಗಳ ಲೋಕಾರ್ಪಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದಿನ ಸರ್ಕಾರಗಳು 5 ಗೈಡ್ ಲೈನ್ಸ್ ಅಳವಡಿಸಿದ್ದು ಅದರಂತೆ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ನಡೆಯುತ್ತಿದೆ. ಗೈಡ್ ಲೈನ್ಸ್ ಗಳ ಪ್ರಕಾರ ಆದಾಯ ತೆರಿಗೆ ಪಾವತಿಸುವವರ ಮತ್ತು ಕಾರು ಹಾಗೂ ಐಷಾರಾಮಿ ಜೀವನ ನಡೆಸುವವರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಅದು ಎಪಿಎಲ್ ಕಾರ್ಡ್ ಆಗಿ ವರ್ಗಾವಣೆಯಾಗುತ್ತದೆ. ಆದರೆ, ರಾಜ್ಯದಲ್ಲಿ ಯಾವ ಪಡಿತರ ಚೀಟಿಯು ರದ್ದಾಗುವುದಿಲ್ಲ ಎಂದು ಭರವಸೆ ನೀಡಿದರು. ಸಾಮಾನ್ಯವಾಗಿ ಸಾಲ ಪಡೆಯಬೇಕಾದರೆ ಬ್ಯಾಂಕಿನವರು ಆದಾಯ ತೆರಿಗೆ ಪಾವತಿ ಪ್ರಮಾಣ ಪತ್ರವನ್ನು ಕೇಳುತ್ತಾರೆ ಎಂದು ಮಾಧ್ಯಮ ವರದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಅಂತಹ ಸಂದರ್ಭದಲ್ಲಿ ಪರಿಷ್ಕರಣೆ ನಡೆಸಿ ನಿಜವಾದ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂದರು. ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ವಿಚಾರದಲ್ಲಿ ಸರ್ಕಾರ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಎಂದ ಅವರು, ಅಂತಹ ಸಂದರ್ಭದಲ್ಲಿ ಒಂದು ವಾರದಲ್ಲಿ ಕಾರ್ಡ್ ಮಂಜೂರು ಮಾಡುತ್ತದೆ ಎಂದರು. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡಿನ ಶೇಕಡಾವಾರು ಐವತ್ತರಷ್ಟಿದೆ. ಆದರೆ, ಕರ್ನಾಟಕದಲ್ಲಿ ಅದರ ಪರಿಮಾಣ 80 ಶೇಕಡಾ ಇರುವುದರಿಂದ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದರು. ಎರಡು ಲಕ್ಷದ ತೊಂಭತ್ತೈದು ಸಾವಿರ ಕಾರ್ಡುಗಳ ಪೈಕಿ ಎರಡು ಲಕ್ಷದ ಅರವತ್ತು ಸಾವಿರ ಬಿಪಿಎಲ್ ಕಾರ್ಡಿನ ಪರಿಷ್ಕರಣೆ ನಡೆಸಿದ್ದು, ಉಳಿದ ಮೂವತ್ತೈದು ಸಾವಿರ ಕಾರ್ಡುಗಳನ್ನು ಶೀಘ್ರವೇ ಪರಿಷ್ಕರಣೆ ನಡೆಸಿ ಬಳಿಕ ಹೊಸ ಕಾರ್ಡುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸರ್ವರ್ ಸಮಸ್ಯೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.‌


LEAVE A REPLY

Please enter your comment!
Please enter your name here