ಮಂಗಳೂರು: ನಗರದ ಪಿಲಿಕುಲ ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ 2,000ಕಿ.ಮೀ. ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಘರಿಯಾಲ್ ಮೊಸಳೆ ಸೇರಿದಂತೆ ಹಲವಾರು ಹೊಸ ಅತಿಥಿಗಳ ಆಗಮನವಾಗಿದೆ. ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಾಲ್ ಮೊಸಳೆ ಮತ್ತು ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್, ಎರಡು ಹಳದಿ-ಗೋಲ್ಡನ್ ಫೆಸೆಂಟ್ ಗಳು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಮೇರೆಗೆ ಪಿಲಿಕುಳ ಮೃಗಾಲಯಕ್ಕೆ ಆಗಮಿಸಿವೆ. ಪಿಲಿಕುಳದಿಂದ ನಾಲ್ಕು ಕಾಡು ನಾಯಿ ಅಥವಾ ಧೋಲ್, ಅಪರೂಪದ 4 ರೇಟಿಕುಲೆಟೆಡ್ ಹೆಬ್ಬಾವು, ಎರಡು ಬ್ರಾಹಿಣಿ ಗಿಡುಗಗಳು, ಮೂರು ಏಶಿಯನ ಪಾಮ್ ಸಿವೇಟ, ಎರಡು ಲಾರ್ಜ್ ಇಗರೇಟ್‌ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುತ್ತದೆ. ವಿನಿಮಯದಲ್ಲಿ ಪಿಲಿಕುಲದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಲ ಮೃಗಾಲಯದಲ್ಲೇ ಜನಿಸಿದವುಗಳಾಗಿದೆ. ಪಿಲಿಕುಲದಲ್ಲಿ ಸದ್ಯ ಮೂರು ಸಿಂಹಗಳಿದ್ದು, ಅವುಗಳಿಗೆ ಜೊತೆಗಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ. ನಂದನ್ ಕಾನನ್ ಮೃಗಾಲಯದಿಂದ ಇಬ್ಬರು ಪಶುವೈದ್ಯಾಧಿಕಾರಿ ಮತ್ತು 8ಮಂದಿ ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆ ನೋಡಿಕೊಂಡು ಆಗಮಿಸಿರುತ್ತಾರೆ. ಪ್ರಾಣಿ ವಿನಿಮಯದ ಜವಾಬ್ದಾರಿಯನ್ನು ಎರಡು ಮೃಗಾಲಯಗಳು ಸರಿ ಸಮಾನವಾಗಿ ವಹಿಸಿಕೊಳ್ಳಬೇಕಾಗುತ್ತದೆ. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ (Quarantine Ward) ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವುದು. ಪಂಜಾಬಿನ ಚಟ್ಟಬಿರ್ ಮೃಗಾಲಯ, ಬಾಂಬೆನ ಬೈಕುಲಾ ಮತ್ತು ಮದರಾಸ್ ಪ್ರೊಕೊಡೈಲ್ ಬ್ಯಾಂಕ್‌ನಿಂದ ಪ್ರಾಣಿ, ಪಕ್ಷಿಗಳ ವಿನಿಮಯದ ಒಪ್ಪಂದ ನಡೆಯುತ್ತಿದೆ. ವಿಶೇಷವಾಗಿ ಅನಕೊಂಡ ಉರಗ, Humboldt ಪೆಂಗ್ವಿನ್ ಪಕ್ಷಿಗಳನ್ನು ತರಿಸಿ ಪಿಲಿಕುಳ ಮೃಗಾಲಯದಲ್ಲಿ ಜನರ ವೀಕ್ಷಣೆಗೆ ಇಡಲು ಪ್ರಯತ್ನಿಸಲಾಗುತ್ತಿದೆ. Humboldt penguinಗಳನ್ನು ಮೃಗಾಲಯದಲ್ಲಿ ಸಂರಕ್ಷಣೆ ಮಾಡುವುದಕ್ಕೆ ಅವುಗಳಿಗೆ ವಿಶೇಷವಾದ ಆವರಣಗಳನ್ನು ಸೃಷ್ಟಿಸಬೇಕಾಗುತ್ತದೆ. ಇದಕ್ಕೆ ದುಬಾರಿ ವೆಚ್ಚ ತಗಲುವುದರಿಂದ ಕೆಲವು ದಾನಿಗಳು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿರುತ್ತಾರೆ.