ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸ್ತೂಲ್ ತೋರಿಸಿ, ಮಾರಕಾಯುಧಗಳ ಜೊತೆಗೆ ಸಿನಿಮೀಯ ರೀತಿಯಲ್ಲಿ ಬಂದ ತಂಡವನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಮನೆಯ ಸಮೀಪ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಮಾರಕಾಯುಧಗಳಿಂದ ಬಂದ ದುಷ್ಕರ್ಮಿಗಳ ತಂಡವೊಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣ ಇತ್ತೀಚೆಗೆ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿನ್ ಆಲೂರು, ಶರತ್ ದೇವಾಡಿಗ ಆಲೂರು, ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡೀಸ್, ಪ್ರದೀಪ್ ಪಡುಕೋಣೆ, ಕಾರ್ತಿಕ್ ಪೂಜಾರಿ, ಪ್ರಕಾಶ್ ಮೊಗವೀರ, ಕೀರ್ತಿಕ್ ಪೂಜಾರಿ, ಗಣೇಶ್ ಪೂಜಾರಿ, ವಿಶಾಲ್, ಗೌತಮ್, ಸಂತೋಷ್ ನಾಡ, ಮಹೇಂದ್ರ, ಜಗದೀಶ್ ಮೊಗವೀರ, ಸಂತೋಷ್ ಹಡವು, ಅಂಕಿತ್ ಪೂಜಾರಿ, ಶಿವರಾಜ್, ಸಾಧನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳಲ್ಲಿ ಇಬ್ಬರು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 1 ಏರ್ ಪಿಸ್ತೂಲ್, 4 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳೆದ ಐದು ದಿನಗಳ ಹಿಂದೆ ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಸಂಜೆ ಮಾತನಾಡುತ್ತಾ ನಿಂತುಕೊಂಡಿದ್ದ ವೇಳೆ ಆರೋಪಿಗಳು ಏಕಾಏಕಿ ಮಾರಕಾಯುಧಗಳಿಂದ ಬಂದು ಹಲ್ಲೆಗೆ ಯತ್ನಿಸಿದ್ದಾರೆ.
ಆರೋಪಿಗಳ ತಂಡ ಪಿಸ್ತೂಲ್, ಕಬ್ಬಿಣದ ಪೈಪ್‌ಗೆ ತುದಿಯಲಿ ಹಲ್ಲುಗಳುಳ್ಳ ಚಕ್ರ ಇರುವ ಆಯುಧ, ಕಬ್ಬಿಣದ ರಾಡ್, ಮರದ ಸೊಂಟೆ ಇತ್ಯಾದಿ ಮಾರಕಾಯುಧಗಳನ್ನು ಹಿಡಿದು ಮಾರಕಾಯುಧಗಳನ್ನು ಬೀಸುತ್ತಾ ಬೆದರಿಸಿದ್ದಾರೆ. ಗಲಾಟೆ ಮಾಡುವುದಿದ್ದರೇ ನಿಮಗೆ ಈಗಲೇ ಶೂಟ್ ಮಾಡಿ ಸಾಯಿಸುವುದಾಗಿ ಪಿಸ್ತೂಲ್ ತಲೆಗೆ ಹಿಡಿದು ಜೀವ ಬೆದರಿಕೆ ಹಾಕಿದ ಪ್ರಕರಣ ಇದಾಗಿದೆ.