ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆ ಇಂದು ನಡೆಯುತ್ತಿದ್ದು ಸಂಸದ ಬ್ರಿಜೇಶ್ ಚೌಟ, ಶಾಸಕ ಡಾ.ವೈ.ಭರತ್ ಶೆಟ್ಟಿ ಸೇರಿದಂತೆ ಮನಪಾ ಸದಸ್ಯರು ಮತದಾನ ಚಲಾಯಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಮತ ಕೇಂದ್ರದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ಮನಪಾ ಮೇಯರ್ ಮನೋಜ್, 65 ಮನಪಾ ಸದಸ್ಯರು ಮತದಾನ ಮಾಡಿದರು. ಈ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಇದೀಗ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ. ಈ ಬಾರಿ ನಡೆಯುವ ಚುನಾವಣೆಗೆ ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಕಿಶೋರ್ ಬಿ.ಆರ್ , ಕಾಂಗ್ರೆಸ್ ನಿಂದ ರಾಜು ಪೂಜಾರಿ , ಎಸ್ ಡಿ ಪಿ ಐ ನಿಂದ ಅನ್ವರ್ ಸಾದತ್.ಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಸ್ಪರ್ಧಿಸುತ್ತಿದ್ದಾರೆ. ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆಗೆ ಒಟ್ಟು 6032 ಮತದಾರರಿದ್ದಾರೆ. ಮತ ಎಣಿಕ ಕಾರ್ಯ ಮಂಗಳೂರು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 24ರಂದು ನಡೆಯಲಿದೆ.