ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಭಾನುವಾರ ರಾತ್ರಿ ನಡೆದ ಮಂಗಳೂರು ದಸರಾ ಶೋಭಾಯಾತ್ರೆ ಸೋಮವಾರ ಬೆಳಗ್ಗೆ ಸಂಪನ್ನಗೊಂಡಿತು.
ಭಾನುವಾರ ಸಂಜೆ ಕುದ್ರೋಳಿಯಿಂದ ಶ್ರೀ ಶಾರದೆ ಶೋಭಾಯಾತ್ರೆಯಲ್ಲಿ ಹೊರಟಿದ್ದು, ಸೋಮವಾರ ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಕುದ್ರೋಳಿಗೆ ಆಗಮಿಸಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಜಲಸ್ತಂಭನವಾಯಿತು. ಈ ಮೂಲಕ ಮಂಗಳೂರು ದಸರಾ ಮೆರವಣಿಗೆ ಸಮಾಪನಗೊಂಡಿತು. ಶೋಭಾಯಾತ್ರೆಯುದ್ದಕ್ಕೂ ಲಕ್ಷಾಂತರ ಮಂದಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ಸರ್ಕಲ್, ಲಾಲ್ ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಅಳಕೆಯ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ನಗರದ 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿತು.
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ನವ ದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಸಾಗಿದ ಬಳಿಕ ಸ್ತಬ್ಧಚಿತ್ರಗಳು ತೆರಳಿತು. ಹುಲಿವೇಷ ಸೇರಿದಂತೆ ವಿಭಿನ್ನ ರೀತಿಯ ಸ್ತಬ್ಧಚಿತ್ರ, ನಾನಾ ದೇವಸ್ಥಾನಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.