ಮಂಗಳೂರು: ಮುಲ್ಕಿ ಮೂಡುಬಿದ್ರೆ ರೂಟ್‌ನಲ್ಲಿ ಸಂಚರಿಸುತ್ತಿರುವ ಕಟೀಲು ಮೂಲದ ಲೆಸ್ಟರ್ ಟ್ರಾವೆಲ್ಸ್ ತಮ್ಮ ನೂತನ ಬಸ್ಸಿಗೆ “ಇಸ್ರೇಲ್” ಎಂಬ ನಾಮಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿ ಒಂದು ವರ್ಗದ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಬಸ್ಸಿನ ಯಜಮಾನ ಏಕಾಏಕಿ ಮರುದಿನವೇ ಬತ್ತಿನ ನಾಮಫಲಕವನ್ನು ಜೆರುಸಲೇಮ್‌ಗೆ ಬದಲಾಯಿಸಿದ್ದಾರೆ. ಬ್ರಿಟಿಷರು ಬಿಟ್ಟು ಹೋದ ಇಸ್ರೇಲ್ ಭಾಗಕ್ಕಾಗಿ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವೆ ಆಗಾಗ ಸಂಭವಿಸುತ್ತಿದ್ದು, ಈ ಬಗ್ಗೆ ಭಾರತದಲ್ಲಿ ರಾಜಕೀಯ ಚರ್ಚೆ ಕೂಡ ಕಳೆದ ಬಾರಿ ವಿಪರೀತಕ್ಕೆ ಹೋಗಿತ್ತು. ಈ ನಡುವೆ ಕಟೀಲು ಲೆಸ್ಟರ್ ಟ್ರಾವೆಲ್ಸ್ ಮಾಲಿಕ ತಮ್ಮ ನೂತನ ಬಸ್ಸಿಗೆ ಇಸ್ರೇಲ್ ನಾಮಫಲಕ ಅಳವಡಿಸಿದ್ದು ಒಂದು ವರ್ಗದ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಸ್‌ನಲ್ಲಿ ಪ್ರಯಾಣದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಂತೆ ಎಚ್ಚೆತ್ತ ಬಸ್ಸಿನ ಮಾಲಕ ಬಸ್ಸಿನ ಹೆಸರನ್ನು ಜೆರುಸಲೇಮ್‌ಗೆ ಬದಲಾಯಿಸಿದ್ದಾನೆ. ಈ ಬಗ್ಗೆ ಮಾಲೀಕ ಲೆಸ್ಟರ್ ಕಟೀಲು ಮಾಧ್ಯಮದ ಜೊತೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಬಸ್ಸಿನ ಹೆಸರು ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದೆ ಎಂದರು. ಇದೀಗ “ಬಸ್ ಇಸ್ರೇಲ್‌ಗೆ ಹೋಗಿ ಜೆರುಸಲೆಮ್ ಗೆ ವಾಪಾಸಾಗಿದೆ” ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಆಗುತ್ತಿದೆ ಎಂದು ಅವರು ಬೇಸರದಿಂದ ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.