ಮಂಗಳೂರು: ಶಾಲಾ ವಿದ್ಯಾರ್ಥಿಯೋರ್ವನನ್ನು ಬಸ್‌ಪಾಸ್ ಹೊಂದಿರದ ಕಾರಣಕ್ಕೆ ನಿರ್ವಾಹಕ ದಾರಿಮಧ್ಯದಲ್ಲೇ ಬಸ್ಸಿನಿಂದ ಇಳಿಸಿದ ಬಗ್ಗೆ ಬಾಲಕನ ಹೆತ್ತವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಇಲ್ಲಿನ ಖಾಸಗಿ ವಿದ್ಯಾಸಂಸ್ಥೆಯೊಂದರ 11 ಹರೆಯದ ವಿದ್ಯಾರ್ಥಿ ಉಪ್ಪಿನಂಗಡಿಯಿಂದ ಎಂದಿನಂತೆ ಕೊಣಾಲು ಗ್ರಾಮದಲ್ಲಿನ ತನ್ನ ಮನೆಗೆ ಹೋಗಲೆಂದು ಸೆ.28ರಂದು ಸಂಜೆ ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟ ಕೆಎಸ್ಸಾರ್ಟಿಸಿ ಬನ್ನೊಂದನ್ನು ಏರಿದ್ದಾನೆ.
ಈ ವೇಳೆ ಬಸ್ ನಿರ್ವಾಹಕ ಪಾಸ್ ತೋರಿಸಲು ಹೇಳಿದಾಗ ಪಾಸ್ ಕಳೆದುಹೋಗಿರುವುದು ವಿದ್ಯಾರ್ಥಿಯ ಅರಿವಿಗೆ ಬಂದಿದೆ. ಇದನ್ನು ನಿರ್ವಾಹಕನ ಗಮನಕ್ಕೆ ತಂದಾಗ ಆತ ವಿದ್ಯಾರ್ಥಿಯನ್ನು ಉಪ್ಪಿನಂಗಡಿ-ಆತೂರು ಮಧ್ಯದ ರಸ್ತೆಯಲ್ಲಿ ಬಲವಂತವಾಗಿ ಇಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ವಿದ್ಯಾರ್ಥಿಯ ತಂದೆ ಮಹಾಬಲ ಎಂಬವರು ದ.ಕ. ಜಿಲ್ಲಾಧಿಕಾರಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ಬಸ್ಸಿನಿಂದ ಇಳಿಸಿ ಅವಮಾನಿಸಿದ್ದರಿಂದ ಬಾಲಕ ಮಾನಸಿಕವಾಗಿ ಆಘಾತಗೊಂಡಿದ್ದಾನೆ. ಇದೀಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಆಪಾದಿಸಿದ್ದಾರೆ.