ಸುಳ್ಯ: ಕಾಲೇಜು ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಾಸರಗೋಡಿನ ಅಬ್ದುಲ್ ನಿಯಾಝ್ (22) ಎಂದು ಗುರುತಿಸಲಾಗಿದೆ ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುವ ಬಸ್ಗೆ ಸುಳ್ಯದ ಕಾಲೇಜಿನಲ್ಲಿ ಕಲಿಯುತ್ತಿರುವ ಸಕಲೇಶಪುರದ ವಿದ್ಯಾರ್ಥಿನಿ ಹತ್ತಿದ್ದು, ಬಸ್ನಲ್ಲಿ ಯುವಕನೋರ್ವನ ಹತ್ತಿರ ಕುಳಿತಿದ್ದರು.
ಈ ವೇಳೆ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ವಿಚಾರದ ಬಗ್ಗೆ ಯುವತಿ ಬಸ್ ನಿರ್ವಾಹಕ ಹಾಗೂ ಬಸ್ನಲ್ಲಿದ್ದವರಿಗೆ ತಿಳಿಸಿದ್ದು, ಅವರು ಯುವಕನ ನಡೆಯನ್ನು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡಿದ್ದರು. ವಿಚಾರದ ಬಗ್ಗೆ ಯುವತಿ ಸುಳ್ಯದ ಸಂಘ ಪರಿವಾರದವ ಯುವಕರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿತ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದು ಬೇರೊಂದು ಬಸ್ಸಿನಲ್ಲಿ ಸುಳ್ಯಕ್ಕೆ ಆಗಮಿಸಿದ್ದು, ಸುಳ್ಯದ ಪೈಚಾರ್ ಎಂಬಲ್ಲಿ ಇಳಿದಿದ್ದಾನೆ. ಈ ವೇಳೆ ಅಲ್ಲಿದ್ದ ಯುವಕರು ಆರೋಪಿತ ಯುವಕನನ್ನು ಹಿಡಿದು ಕಾರಲ್ಲಿ ಕಿಡ್ನಾಪ್ ಮಾಡಿ ಸುಳ್ಯದ ಬಸ್ ನಿಲ್ದಾಣ ಸಮೀಪ ಕರೆತಂದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯುವಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕಾಸರಗೋಡಿನ ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿ ಇದೀಗ ಯುವಕ ತನ್ನ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿದು ಬಂದಿದೆ.