ಮಂಗಳೂರು: ನಗರದ ಅತ್ತಾವರದ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29ತುಂಡುಗಳನ್ನಾಗಿ ಮಾಡಿ ಬೇರೆಬೇರೆ ಕಡೆಗಳಲ್ಲಿ ಎಸೆದ ಪ್ರಕರಣದಲ್ಲಿ ದಂಪತಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು ಮೂರನೇ ಅಪರಾಧಿಗೆ ಆರುವರೆ ತಿಂಗಳು ಸಜೆಯನ್ನು ವಿಧಿಸಿದೆ. ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ (35), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ವಿರುದ್ಧ ಆರೋಪ ಮೊದಲೇ ಸಾಬೀತಾಗಿತ್ತು. ಮಂಗಳವಾರ ತೀರ್ಪು ಪ್ರಕಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.ರವರು, ಜೋನಸ್ ಸ್ಯಾಮ್ಸನ್ ಹಾಗೂ ವಿಕ್ಟೋರಿಯಾ ಮಥಾಯಿಸ್‌ಗೆ ಐಪಿಸಿ ಸೆಕ್ಷನ್ 302 (ಕೊಲೆ) ಹಾಗೂ ಸೆಕ್ಷನ್ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿದ್ದಾರೆ. ಅಪರಾಧಿಗಳು ದಂಡ ತೆರಲು ತಪ್ಪಿದಲ್ಲಿ ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 201 (ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷ್ಯನಾಶ) ಮತ್ತು ಸೆಕ್ಷನ್ 34ರ ಅಡಿ 7ವರ್ಷಗಳ ಸಾದಾ ಸಜೆ ಮತ್ತು ತಲಾ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲವಾದಲ್ಲಿ 3 ತಿಂಗಳ ಸಾದಾ ಸಜೆ. ಐಪಿಸಿ ಸೆಕ್ಷನ್ 392 (ಸುಲಿಗೆ) ಮತ್ತು 34ರ ಅಡಿಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು ಆದೇಶ ಮಾಡಿದ್ದಾರೆ. ರಾಜುಗೆ ಐಪಿಸಿ ಸೆಕ್ಷನ್ 414ರ ಅಡಿ (ಕದ್ದ ಸ್ವತ್ತು ಬಚ್ಚಿಡಲು ನೆರವು) ಆರೂವರೆ ತಿಂಗಳು ಸಾದಾ ಸಜೆ ಮತ್ತು 5ಸಾವಿರ ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ ಶ್ರೀಮತಿ ಶೆಟ್ಟಿ ತಾಯಿಗೆ 75 ಸಾವಿರ ಪರಿಹಾರ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು. ಅಪರಾಧಿಗಳಿಗೆ ಹೆಚ್ಚುವರಿ ಶಿಕ್ಷೆಗೆ ಒತ್ತಾಯಿಸಿ ಸರ್ಕಾರದ ಮೂಲಕ ಹೈಕೋರ್ಟ್ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ವಕೀಲರು ತಿಳಿಸಿದ್ದಾರೆ.