Home ಕರಾವಳಿ ಮಂಗಳೂರು: ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣ- ದಂಪತಿ ಸಹಿತ ಮೂವರ ಮೇಲಿನ ಕೊಲೆ...

ಮಂಗಳೂರು: ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣ- ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

0

ಮಂಗಳೂರು: ಐದು ವರ್ಷಗಳ ಹಿಂದೆ ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆಬೇರೆ ಕಡೆಗಳಲ್ಲಿ ಎಸೆದ ಪ್ರಕರಣದಲ್ಲಿ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ‌‌. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ. ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಟ್ಸನ್(40), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಶಿಕ್ಷೆಗೊಳಗಾದ ಆರೋಪಿಗಳು. ಈ ಪೈಕಿ ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.

ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ(42) ಶ್ರೀ ಪೊಳಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಜೊತೆಗೆ ಕುರಿ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್ 2ಸದಸ್ಯತ್ವ ಹೊಂದಿದ್ದ. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಮಾಸಿಕ ಕಂತುಗಳ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.‌ 2019ರ ಮೇ 11ರಂದು ಬೆಳಗ್ಗೆ 9:15ಕ್ಕೆ ಹಣ ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಆರೋಪಿ ಜೋನಸ್‌ನ ಮನೆಗೆ ತೆರಳಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಅವರನ್ನು ಜೋನಸ್ ಮತ್ತಾತನ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಚಿನ್ನಾಭರಣಗಳನ್ನು ಸುಲಿಗೆಗೈದು ಕುತ್ತಿಗೆ ಕೊಯ್ದು ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ವ್ಯಾನಿಟಿ ಬ್ಯಾಗ್, ಚಪ್ಪಲಿಯನ್ನು ಮನೆಯಲ್ಲಿ ಸುಟ್ಟು ಹಾಕಿದ್ದರು. ಮೂರು ದಿನದ ಬಳಿಕ ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದ. ಕದ್ರಿ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡಿದ್ದರು. ಇನ್ಸ್‌ಪೆಕ್ಟ‌ರ್ ಶಾಂತಾರಾಂ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿಯವರು 48 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ, 141 ದಾಖಲೆಗಳನ್ನು ಗುರುತಿಸಿ ಮೂವರ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೆ.17ಕ್ಕೆ ಘೋಷಿಸುವುದಾಗಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.

LEAVE A REPLY

Please enter your comment!
Please enter your name here