ಕಡಬ ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಯುವಕನ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ.ಡಿ. ಅವರು ವಜಾಗೊಳಿಸಿದ್ದಾರೆ.
ಕೇರಳ ಮಲ್ಲಾಪುರದ ಅಬಿನ್ ಎಂಬಾತ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣದಿಂದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಸಮವಸ್ತ್ರ ಧರಿಸಿಕೊಂಡು ಮಾ. 4ರಂದು ಬೆಳಿಗ್ಗೆ ಕಾಲೇಜಿಗೆ ಬಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿತ್ತು.
ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಅಭಿಯೋಜನೆಯ ಹಾಗೂ ಆರೋಪಿ ಪರ ವಾದ ಆಲಿಸಿ ಪ್ರಸ್ತುತ ವಿದ್ಯಾರ್ಥಿನಿಯರ ಪರಿಸ್ಥಿತಿಯನ್ನು ಅಭಿಯೋಜನೆಯು ವಾದ ಸಂದರ್ಭ ಹಾಜರು ಪಡಿಸಿದ ವೈದ್ಯಕೀಯ ಧೃಡಪತ್ರದ ಮೂಲಕ ತಿಳಿದುಕೊಂಡು ಈಗಲೂ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದರಿಂದ ಆರೋಪಿಗೆ ಜಾಮೀನು ನೀಡಿದ್ದಲ್ಲಿ ಅವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟು ದೋಷಾರೋಪಣಾ ಪತ್ರದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹಾಗೂ ಪ್ರಕರಣದ ತೀವ್ರತೆಯನ್ನು ಗಮನಿಸಿ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಅಭಿಯೋಜನೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತಿ ಕೆ ಭಟ್ ವಾದಿಸಿದ್ದರು.