ಕಾರ್ಕಳ : ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ, ಮಾದಕ ದ್ರವ್ಯ ಪಡೆದಿರುವ ಬಗ್ಗೆ ಕಾರ್ಕಳ ನಗರ ಠಾಣೆಯ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದ್ದು, ಆರೋಪಿಗಳು ಯುವತಿಗೆ ನೀಡಿರುವ ಡ್ರಗ್ ಸಿಂಥೆಟಿಕ್ ಡ್ರಗ್ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ಬಂದಿದ್ದು ಎಲ್ಲಿಂದ? ಡ್ರಗ್ಸ್ ಪೆಡ್ಲರ್ ಪರಿಚಯವಾಗಿದ್ದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿ ಅಲ್ತಾಫ್ ಕಾರಿನಲ್ಲಿ ಕರೆದೊಯ್ದು ಯುವತಿ ರೇಪ್ ಮಾಡಿದ್ದ. ಯುವತಿಗೆ ಸಿಂಥೆಟಿಕ್ ಡ್ರಗ್ಸ್ ನೀಡಲಾಗಿತ್ತು. ಆದರೆ ಅಲ್ತಾಫ್ ಗೆ ಡ್ರಗ್ಸ್ ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಲ್ತಾಫ್ & ಟೀಂ ಬೆಂಗಳೂರಿಗೆ ತೆರಳಿ ವ್ಯಕ್ತಿಯೋರ್ವನಿಂದ ಡ್ರಗ್ಸ್ ಖರೀದಿಸಿದ್ದರು.
ಬೆಂಗಳೂರು ಡ್ರಗ್ ಪೆಡ್ಲರ್ ಅಲ್ತಾಫ್ಗೆ ಪರಿಚಯವಾಗಿದ್ದು ಹೇಗೆ..?
ಬಿಜೆಪಿ ಕಾರ್ಯಕರ್ತ ಅಭಯ್ ಮೂಲಕ ಅಲ್ತಾಫ್ಗೆ ಬೆಂಗಳೂರು ಮೂಲದ ಡ್ರಗ್ಸ್ ಸೇಲ್ ಮಾಡುವ ವ್ಯಕ್ತಿಯೋರ್ವ ಪರಿಚಯವಾಗಿದ್ದ. ಆರೋಪಿ ಅಭಯ್ ತನ್ನ ಜೊತೆ ಅಲ್ತಾಫ್ & ಇತರರನ್ನು ಬೆಂಗಳೂರಿಗೆ ಕರೆದೊಯ್ದು ಡ್ರಗ್ಸ್ ಖರೀದಿಸಿ ಬಳಿಕ ಖರೀದಿಸಿದ್ದ ಡ್ರಗ್ಸ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಉಳಿದ ಡ್ರಗ್ಸ್ ಅನ್ನ ಅಲ್ತಾಫ್ ಕೃತ್ಯಕ್ಕೆ ಬಳಕೆ ಮಾಡಿದ್ದ. ಪ್ರಕರಣದ ಇನ್ನಿಬ್ಬರು ಆರೋಪಿ ಗಿರಿರಾಜು ಜಗಾಧಾಬಿ(31)ಆಂಧ್ರಪ್ರದೇಶ, ಹಾಗೂ ಜಾನ್ ನೊರೋನ್ಹಾ(30)ಶಂಕರಪುರ, ಇವರುಗಳು ಈ ಮೊದಲು ಕುವೈಟ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು, ಗಿರಿರಾಜು ಇವನು ಜಾನ್ ನೊರೋನ್ಹಾನಿಗೆ ಕರೆ ಮಾಡಿ ಡ್ರಗ್ಸ್ ಸಿಗುವ ಬಗ್ಗೆ ಕೇಳಿದ್ದು, ಜಾನ್ ನೊರೋನ್ನಾ ಗಿರಿರಾಜುನ್ನನು ಉಡುಪಿಗೆ ಬರಲು ತಿಳಿಸಿದ್ದು, ಅದರಂತೆ ಗಿರಿರಾಜು ಉಡುಪಿಗೆ ಬಂದಿರುತ್ತಾನೆ.
ಡಗ್ಸ್ ಬಗ್ಗೆ ಜಾನ್ ನೊರೊನ್ನಾ ಶಾಹಿದ್(39), ಕಾರ್ಕಳ ಈತನನ್ನು ಪರಿಚಯಿಸಿರುತ್ತಾನೆ. ಶಾಹಿದ್ ಸ್ಥಳೀಯವಾಗಿ ಸುಮಾರು ಒಂದು ತಿಂಗಳಿಂದ ಸಿಂಥೆಟಿಕ್ ಡ್ರಗ್ಸ್ ಗೆ ಪ್ರಯತ್ನಿಸಿ, ಸಿಗದೇ ಇರುವುದರಿಂದ, ಅಭಯ್(23), ಕಾರ್ಕಳ ನನ್ನು ಸಂಪರ್ಕಿಸುತ್ತಾನೆ. ಅಭಯ್ ಈ ಮೊದಲು ಕೆಲಸ ಮಾಡಿಕೊಂಡಿರುವ ಬೆಂಗಳೂರಿನಲ್ಲಿ ಡ್ರಗ್ಸ್ ಸಿಗುವ ಬಗ್ಗೆ ಖಚಿತಪಡಿಸಿಕೊಂಡು, ಶಾಹಿದ್ ಗಿರಿರಾಜುನನ್ನು ಬೆಂಗಳೂರಿಗೆ ಬರಲು ತಿಳಿಸುತ್ತಾನೆ. ಕಾರ್ಕಳದಿಂದ ಶಾಹಿದ್, ಅಲ್ತಾಫ್ ಮತ್ತು ಅಭಯ್ ನೊಂದಿಗೆ ಬೆಂಗಳೂರಿಗೆ ತೆರಳಿರುತ್ತಾರೆ. ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್‌ನ್ನು ಖರೀದಿ ಮಾಡಿ, ಗಿರಿರಾಜುಗೆ ನೀಡಿರುತ್ತಾರೆ. ಈ ಮೂರು ಆರೋಪಿಗಳು ಬ್ರೋಕರೇಜ್ ಕಮಿಷನ್ ಪಡೆದು, ಅದರಲ್ಲಿ ಸ್ವಲ್ಪ ಡ್ರಗ್ಸ್‌ನ್ನು ಅಲ್ತಾಫ್ ತಂದಿರುತ್ತಾನೆ. ಅದೇ ಡ್ರಗ್ಸ್ ಅನ್ನು ಮದ್ಯದಲ್ಲಿ ಬರೆಸಿ ಯುವತಿಗೆ ಕುಡಿಸಿ ಅಲ್ತಾಫ್ ಅತ್ಯಾಚಾರ ಎಸಗಿದ್ದ.
ಯುವತಿಗೆ ನೀಡಿ ಉಳಿದ ಡ್ರಗ್ಸ್‌ನ್ನು ಅಲ್ತಾಫ್ ನ ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ. ಹಾಗೂ ಗಿರಿರಾಜು ಇವನಿಂದ ಎಂಡಿಎಮ್ಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಪ್ರಕರಣ ಸಂಬಂಧ ಐವರನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಆರೋಪಿಗಳಿಗೆ ಡ್ರಗ್ಸ್ ನೀಡಿದ ವ್ಯಕ್ತಿಯ ದಸ್ತಗಿರಿ ಬಾಕಿ ಇರುತ್ತದೆ. ಕಾರ್ಕಳ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.