ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದ ಉದ್ಘಾಟನಾ ಸಮಾರಂಭವು ಕಾಲೇಜಿನ ಆವರಣದ ನೇತಾಜಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ. ಎಸ್ ನೆರವೇರಿಸಿ “ಕ್ರೀಡೆ ನಾಯಕತ್ವದ ಗುಣವನ್ನು ಬೆಳೆಸುವುದರೊಂದಿಗೆ ಭಾವೈಕ್ಯತೆಯನ್ನು ಕೂಡಾ ಜಾಗೃತಗೊಳಿಸುತ್ತದೆ. ವಿದ್ಯಾಭಾರತಿಯ ಕ್ರೀಡಾಕೂಟಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒದಗಿ ಬರುವ ಸುವರ್ಣಾವಕಾಶಗಳನ್ನು ಕಡೆಗಣಿಸದೆ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು” ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ಅವರು ವಹಿಸಿಕೊಂಡರು. ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಪ್ರತಿಭೆ ಎಂದರೆ ಕೇವಲ ಓದಿನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ. ಪ್ರತಿಭಾ ಪ್ರದರ್ಶನಕ್ಕೆ ಸಾಕಷ್ಟು ವೇದಿಕೆಗಳು ಇವೆ. ಯಾವುದೇ ಕ್ಷೇತ್ರದಲ್ಲಾದರೂ ಲಭ್ಯ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಗೆಲುವು ನಮ್ಮದಾಗುತ್ತದೆ” ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಲೋಕಯ್ಯ ಡಿ. ಉಪಸ್ಥಿತರಿದ್ದು, “ಒಲಿಂಪಿಕ್‌ನಂತಹ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ವಿದ್ಯಾಭಾರತಿಯ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಭಾಗವಹಿಸಿ ದೇಶಕ್ಕೆ ಕೀರ್ತಿ ತಂದ ಉದಾಹರಣೆಗಳಿವೆ. ವಿದ್ಯಾಭಾರತಿಯಲ್ಲಿ 64 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದು ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕದ ಹಲವು ವಿದ್ಯಾಸಂಸ್ಥೆಗಳ ಕ್ರೀಡಾಪಟುಗಳು, ದೈಹಿಕ ನಿರ್ದೇಶಕರು, ಅಧ್ಯಾಪಕರು, ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಭಾಗಿಯಾಗಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಸ್ವಾಗತಿಸಿ, ದೈಹಿಕ ನಿರ್ದೇಶಕರಾದ ಡಾ. ಜ್ಯೋತಿ ವಂದಿಸಿದರು.ಉಪನ್ಯಾಸಕಿ ತುಷಾರ ಆರ್.ಬಿ ಕಾರ್ಯಕ್ರಮವನ್ನು ನಿರೂಪಿಸಿದರು.