“ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಶನಿವಾರ ನೀಡಿದ ಅನುಮತಿಯಿಂದ ಜನ ವಿರೋಧಿ ಭ್ರಷ್ಟ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸತ್ಯಕ್ಕೆ ಜಯ ಸಿಗಲೇಬೇಕು ಎನ್ನುವುದು ಅರ್ಥವಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದ ಪ್ರಕರಣ ಕೇವಲ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಚಾರದ ಪ್ರಕರಣವಾಗಿರದೇ, ದುರ್ಬಲ, ಬಡ ವರ್ಗದ ಜನರಿಗೆ ಎಸಗಿರುವ ವಂಚನೆಯಾಗಿದೆ.
“ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ, ಸಣ್ಣದೊಂದು ಕಪ್ಪು ಚುಕ್ಕಿ ಇಲ್ಲದಂತೆ ರಾಜಕೀಯ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ ಎನ್ನುವ ರೀತಿ ಸಾರ್ವಜನಿಕವಾಗಿ ಸಾರುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಭ್ರಷ್ಟಾಚಾರ ಎಸಗುವ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ”
“ಒಂದೆಡೆ ಕಾಂಗ್ರೆಸ್ ರಾಜ್ಯದ ಬೊಕ್ಕಸವನ್ನೇ ಖಾಲಿ ಮಾಡಿದ್ದು, ಮತ್ತೊಂದೆಡೆ ಬಡವರ ಹಕ್ಕುಗಳನ್ನು ನಿರ್ಲಕ್ಷಿಸಿ ತಮ್ಮ ಖಜಾನೆ ತುಂಬಿಸಿಕೊಂಡಿದೆ. ಇದು ಹಗಲು ದರೋಡೆಯಾಗಿದ್ದು, ಇನ್ನು ಮುಂದೆ ಸಿದ್ದರಾಮಯ್ಯ ಸಿಎಂ ಹುದ್ದೆಯ ಪ್ರಭಾವ ಬೀರಿ ನುಣುಚಿಕೊಳ್ಳಲು ಸಾಧ್ಯವಿಲ್ಲ.”
“ಪ್ರಜಾಪ್ರಭುತ್ವದ ಮೇಲೆ ಜನತೆಗಿರುವ ನಂಬಿಕೆ ಉಳಿಸಲು, ಸಿದ್ದರಾಮಯ್ಯ ಅವರು ಈ ಕೂಡಲೇ ಸಿಎಂ ಸ್ಥಾನ ತ್ಯಜಿಸುವ ಸಮಯ ಬಂದಿದ್ದು, ತಮ್ಮ ವಿರುದ್ದ ಕೇಳಿಬಂದಿರುವ ಎಲ್ಲಾ ಆರೋಪಗಳಿಗೆ ಜನತೆ ಮುಂದೆ ಉತ್ತರಿಸಲಿ” ಎಂದು ಸಂಸದ ಬ್ರಿಜೇಶ್ ಚೌಟ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.