ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕಟೀಲು, ಪೊಳಲಿ ಕ್ಷೇತ್ರದ ಭಕ್ತರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಬಸ್ಸು ಸೇವೆ ಅಥವಾ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಆರ್.ಟಿ.ಒ.
ಹಾಗೂ ಪಂಚಾಯತ್‌ನವರ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ನೀಡಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್ ಶೆಟ್ಟಿ ಅವರೊಂದಿಗೆ ಶುಕ್ರವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ಸಿ. ಜತೆ ಚರ್ಚೆ ನಡೆಸಿದರು.
ಅಡ್ಡೂರು ಸೇತುವೆಯಲ್ಲಿ ಬಸ್ಸುಗಳ ಸಂಚಾರಕ್ಕೂ ನಿರ್ಬಂಧ ವಿಧಿಸಿರುವುದರಿಂದ ಪರಿಸರದವರಿಗೆ ತೊಂದರೆಯಾಗಲಿದೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾ-ಕಾಲೇಜುಗಳ ವಾಹನ ತೆರಳುತ್ತಿದ್ದು, ಪ್ರಸ್ತುತ ಅಡ್ಡಲಾಗಿ ಗಾರ್ಡ್ ಹಾಕಿರುವುದರಿಂದ ಅವುಗಳಿಗೆ ಸಂಚಾರ ಕಷ್ಟ. ಹೀಗಾಗಿ ಶಾಲಾ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕುರಿತು ಯೋಚಿಸಬೇಕು.
ಶಿಥಿಲ ಸೇತುವೆಗಳಲ್ಲಿ ಲಾರಿ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಯೋಚಿಸಲಾಗುವುದು. ಈ ಬಗ್ಗೆ ಆರ್‌ಟಿಒ, ಎರಡು ಕಡೆಯ ಗ್ರಾ.ಪಂ.ನವರು, ಬಸ್ಸು ಮಾಲಕ ಸಂಘಗಳ ಪದಾಧಿಕಾರಿ ಗಳು, ಶಾಲಾ ಬಸ್‌ಗಳ ಪ್ರಮುಖರು ಹಾಗೂ ಇತರ ಪ್ರಮುಖರೊಂದಿಗೆ ಸಭೆ ನಡೆಸುವುದಾಗಿ ಡಿ.ಸಿ. ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅಮರನಾಥ ಜೈನ್ ಮುಂತಾದವರಿದ್ದರು.
ಗುರುಪುರ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧ
ಮಂಗಳೂರು: ಮಂಗಳೂರು ತಾಲೂಕಿನ ಸುರತ್ಕಲ್- ಕಬಕ ರಾಜ್ಯ ಹೆದ್ದಾರಿ 101ರ ಅಡ್ಡೂರು ಸೇತುವೆ ದುಃಸ್ಥಿತಿಯಲ್ಲಿದ್ದು, ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.
ಅಡ್ಡೂರು ಸೇತುವೆ ಮೂಲಕ ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ 101ರ ರಸ್ತೆಯಲ್ಲಿ ಬಿ.ಸಿ.ರೋಡ್-ಪೊಳಲಿ- ಬೆಂಗಳೂರಿಗೆ ಸಂಚರಿಸುವ ಘನ ವಾಹನಗಳು ಬದಲಿ ರಸ್ತೆಯಲ್ಲಿ ಸಾಗಬೇಕಾಗಿದೆ.
ಮಂಗಳೂರು- ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರು- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೈತುರ್ಲಿ ಬಸ್ ನಿಲ್ದಾಣದಿಂದ ಬೈತುರ್ಲಿ – ನೀರು ಮಾರ್ಗ – ಕಲ್ಪನೆ – ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‌ಗೆ ಬಂದು ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ 101ನ್ನು ಸಂಪರ್ಕಿಸಿ, ಪೊಳಲಿ ಹಾಗೂ ಬಿ.ಸಿ.ರೋಡ್‌ನ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಬೇಕು.
ಬಿ.ಸಿ.ರೋಡ್-ಪೊಳಲಿ ಕಡೆಯಿಂದ ಮಂಗಳೂರು- ಗುರುಪುರ ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಸುರತ್ಕಲ್ ಕಬಕ ರಾಜ್ಯ ಹೆದ್ದಾರಿ 101ರ ಕಲ್ಪನೆ-ನೀರುಮಾರ್ಗ-ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ ಬೈತುರ್ಲಿ ಬಸ್‌ಸ್ಟಾಪ್ ಎಂಬಲ್ಲಿ ಮಂಗಳೂರು- ಸೋಲಾಪುರ- ರಾಷ್ಟ್ರೀಯ ಹೆದ್ದಾರಿ 169ನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.