ಪುತ್ತೂರು ಆ, 11: ಸಾಹಿತ್ಯ ಕೂಟ ಮಂಗಳೂರು ಇವರ ಆಶ್ರಯದಲ್ಲಿ ಪುತ್ತೂರಿನ ಬಾಲ್ನಾಡಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಹಿತ್ಯ ಕಲರವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಖ್ಯಾತ ಕವಿ, ಲೇಖಕ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕಾವ್ಯ ಒಂದು ರಸಾನುಭವ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾವ್ಯದ ಶಕ್ತಿ ಕವಿಯಲ್ಲಿ ಅಡಕವಾಗಿರುತ್ತದೆ. ಅದು ಆತನ ಕವಿತ್ವವನ್ನು ಪ್ರಕಟಗೊಳಿಸುತ್ತದೆ. ವಿದ್ಯಾರ್ಥಿಗಳು ಬರೆಯುವ ಕಡೆ ಹೆಚ್ಚಿನ ಗಮನ ವಹಿಸಬೇಕು. ಅದುವೇ ಒಂದು ವಿಶೇಷವಾದ ರಸಾನುಭವ ಎಂದು ಹೇಳಿದರು.
ಹವ್ಯಾಸಿ ಬರಹಗಾರ ಮತ್ತು ಎಸ್.ವಿ. ಎಸ್ ಕಾಲೇಜಿನ ಪ್ರಾಧ್ಯಾಪಕ ಕಿಟ್ಟು ರಾಮಕುಂಜ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಏಕಿರಬೇಕು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುತ್ತಾ, ಸಾಹಿತ್ಯಾಸಕ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ. ಜ್ಞಾನಾರ್ಜನೆಗೆ ಸಾಹಿತ್ಯವೇ ಒಂದು ಪ್ರಬಲವಾದ ಶಕ್ತಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಸೃಜನೆಯತ್ತ ಮನಸ್ಸು ಮಾಡಬೇಕು. ಇಂತಹ ಕಾರ್ಯಕ್ರಮದ ಮುಖಾಂತರ ಮಕ್ಕಳಲ್ಲಿ ಸಾಹಿತ್ಯದ ಕಡೆ ಒಲವು ಮತ್ತಷ್ಟು ಮೂಡುವಂತೆ ಮಾಡಬೇಕು ಎಂದು ನುಡಿದರು.
ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಮೂಡಬೇಕು ಹಾಗೂ ಒಳ್ಳೆಯ ಬರಹಗಾರರನ್ನಾಗಿ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಈ ಸಾಹಿತ್ಯಕೂಟ ಮಂಗಳೂರು ತಂಡ ಇಂತಹ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕೂಟ ಮಂಗಳೂರು ತಂಡದ ಸದಸ್ಯಾರುಗಳಾದ ರಂಜಿತ್ ರೈ, ರೇಷ್ಮಾ, ಶ್ರದ್ಧಾ, ಜಿತೇಶ್, ಸುಕೀರ್ತ್, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.