ಮುಂಬಯಿ: ಜೀವ ವಿಮಾ ವಲಯದ ದೈತ್ಯ ಕಂಪನಿ ಎಲ್‌ಐಸಿ ಇದೀಗ ಆರೋಗ್ಯ ವಿಮಾ ವಲಯಕ್ಕೂ ಕಾಲಿಡಲು ಮುಂದಾಗಿದೆ. ಇದಕ್ಕಾಗಿ ಖಾಸಗಿ ಆರೋಗ್ಯ ವಿಮಾ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳುವ ಗಂಭೀರ ಚಿಂತನೆ ನಡೆಸಿದೆಯೆಂದು ಸಂಸ್ಥೆಯ ಎಂಡಿ ಹಾಗೂ ಸಿಇಒ ಸಿದ್ಧಾರ್ಥ ಮೊಹಾಂತಿ ಹೇಳಿದ್ದಾರೆ.



ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯ ತ್ರೈಮಾಸಿಕ ಫಲಿತಾಂಶವನ್ನು ಗುರುವಾರ ಪ್ರಕಟಿಸಿಲಾಗಿದೆ. ಈ ವೇಳೆ ಮಾತನಾಡಿದ ಅವರು ಈ ವಿಚಾರ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲೇ ಸಂಸ್ಥೆ ಆರೋಗ್ಯ ವಿಮಾ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ ಎಂದು ತಿಳಿಸಿದ್ದಾರೆ.

“ಆರೋಗ್ಯ ವಿಮೆಗಾಗಿ ಹೊಸದೊಂದು ಕಂಪನಿಯನ್ನು ಸ್ಥಾಪಿಸುವ ಬದಲು, ಕಂಪನಿಯನ್ನೇ ಸ್ವಾಧೀನಪಡಿಸಿಕೊಳ್ಳುವುದು ಉತ್ತಮ ಎಂದು ನಾವು ಅಂದುಕೊಂಡಿದ್ದೇವೆ. ಇದರಿಂದ ದೇಶದೆಲ್ಲೆಡೆ ಆರೋಗ್ಯ ವಿಮೆಯನ್ನು ಮಾರಾಟ ಆರಂಭಿಸಲು ನಮಗೆ ಸಾಧ್ಯವಾಗುತ್ತದೆ,” ಎಂದು ಅವರು ವಿವರಿಸಿದ್ದಾರೆ.
ಎಲ್ಐಸಿ ಬಳಿ 14.1 ಲಕ್ಷ ವಿಮಾ ಏಜೆಂಟರಿದ್ದಾರೆ. ಇದು ಜಗತ್ತಿನಲ್ಲೇ ವಿಮಾ ಕಂಪನಿಗಳಲ್ಲಿರುವ ಅತಿ ದೊಡ್ಡ ನೆಟ್ವರ್ಕ್‌ಆಗಿದೆ. ಮೂಲಗಳ ಪ್ರಕಾರ ಈಗಾಗಲೇ ಈ ಏಜೆಂಟರಲ್ಲಿ ಹಲವರು ಆರೋಗ್ಯ ವಿಮೆಯನ್ನು ಗ್ರಾಹಕರಿಗೆ ವಿತರಿಸುತ್ತಿದ್ದಾರೆ.
ಆದರೆ ಅವರು ಖಾಸಗಿ ಕಂಪನಿಗಳ ವಿಮೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ಎಲ್‌ಐಸಿಯೇ ಆರೋಗ್ಯ ವಿಮೆಯನ್ನೂ ಆರಂಭಿಸಿದರೆ ಇವರೂ ಅದೇ ವಿಮೆಯನ್ನು ಮಾರಾಟ ಮಾಡುವ ಸಾಧ್ಯತೆಯಿದೆ.
ಪ್ರಮುಖ ಆರೋಗ್ಯ ವಿಮಾ ಕಂಪನಿಗಳು:ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆರೋಗ್ಯ ವಿಮಾ ಕಂಪನಿಗಳಿದ್ದು, ಇದರಲ್ಲಿ ಒಂದನ್ನು ಅದು ಸ್ವಾಧೀನಪಡಿಸಿಕೊಳ್ಳಬೇಕಿದೆ.
ಸದ್ಯ ಐದು ಕಂಪನಿಗಳು ದೇಶದೆಲ್ಲೆಡೆ ಅಸ್ತಿತ್ವದಲ್ಲಿದೆ ಅವೆಂದರೆ ಸ್ಟಾರ್‌ಹೆಲ್ತ್ & ಅಲೈಡ್‌ಇನ್ಶೂರೆನ್ಸ್, ನಿವಾ ಬೂಪಾ, ಆದಿತ್ಯ ಬಿರ್ಲಾ ಹೆಲ್ತ್‌ಇನ್ಶೂರೆನ್ಸ್, ಕೇರ್‌ಹೆಲ್ತ್‌ಇನ್ಶೂರೆನ್ಸ್‌ಹಾಗೂ ಮಣಿಪಾಲ್‌ಸಿಗ್ನಾ ಹೆಲ್ತ್‌ಇನ್ಶೂರೆನ್ಸ್.
ಇದಲ್ಲದೇ ಇತ್ತೀಚೆಗೆ ನಿಯಂತ್ರಕರು ಇನ್ನೆರಡು ಸಂಸ್ಥೆಗಳಿಗೆ ಆರೋಗ್ಯ ವಿಮೆ ಆರಂಭಿಸಲು ಅನುಮೋದನೆ ನೀಡಿದ್ದಾರೆ. ಅವೆಂದರೆ ಗ್ಯಾಲಕ್ಸಿ ಹೆಲ್ತ್‌ಹಾಗೂ ನಾರಾಯಣ ಹೆಲ್ತ್. ಇವುಗಳಲ್ಲೇ ಒಂದನ್ನು ಎಲ್‌ಐಸಿ ಸ್ವಾಧೀನಪಡಿಸಿಕೊಳ್ಳಬೇಕಿದೆ.
ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಲಾಭ:2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮ 10,544 ಕೋಟಿ ರೂ. ಏಕೀಕೃತ ನಿವ್ವಳ ಲಾಭವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ 9,635 ಕೋಟಿ ರೂ. ಲಾಭ ದಾಖಲಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭ ಶೇ. 9.6ರಷ್ಟು ಏರಿಕೆ ಕಂಡಿದೆ.