ಮಂಗಳೂರು: ನಗರದ ಶರಬತ್ಕಟ್ಟೆ ಸಮೀಪದಲ್ಲಿರುವ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಅಮವಾಸ್ಯೆಯ ಹಾಲೆ ಮರದ ಕೆತ್ತೆಯ ಕಷಾಯ ಹಾಗೂ ಮೆಂತೆ ಗಂಜಿಯ ಉಚಿತ ವಿತರಣೆ ಇಂದು ನಡೆಯಿತು.
ಆಯುಷ್ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆ, ಮಂಗಳೂರಿನ ಸಾವಯವ ಕೃಷಿಕ ಬಳಗ ಹಾಗೂ ವೇದಮಾಯು ಆಯುರ್ವೇದ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಆಟಿ ಕಷಾಯದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆಟಿ ಕಷಾಯ ಕುಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, “ನಮ್ಮ ಪಾರಂಪರಿಕ ಪದ್ಧತಿ ಕೇವಲ ಆಚರಣೆಯಲ್ಲ, ಅದು ನಮ್ಮ ಪರಿಸರ, ದೈಹಿಕ ಆರೋಗ್ಯವನ್ನು ಒಳಗೊಂಡಿರು ಸಂಸ್ಕೃತಿಯಾಗಿದೆ. ಆಷಾಢ ಕಾಲದ ಬಿರುಮಳೆಗೆ ನಮ್ಮ ಪರಿಸರದಲ್ಲಿಯೇ ಸಿಗುವ ಅಂಶಗಳನ್ನು ಮದ್ದಾಗಿ ಸೇವಿಸುವುದನ್ನು ನಮ್ಮ ಪಾರಂಪರಿಕ ವೈದ್ಯಕೀಯ ಪದ್ಧತಿಗಳಾದ ಸಿದ್ಧ, ಆಯುರ್ವೇದದಲ್ಲಿ ತಲೆತಲಾಂತರಗಳಿಂದ ಅನುಭವದಾರಿಕೆಯ ಮೂಲಕ ಇಂದಿಗೂ ಅನುಕರಿಸಲಾಗುತ್ತಿದೆ. ಇಂತಹ ಪದ್ಧತಿಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ಅದನ್ನು ವರ್ಗಾಯಿಸುವ ಕೆಲಸ ಬಹುಮುಖ್ಯವಾಗಿ ತುಳುನಾಡಿನಲ್ಲಿ ಆಗುತ್ತಿದೆ. ಇದು ಬಹಳ ಶ್ಲಾಘನೀಯ ಕೆಲಸವಾಗಿದೆ. ನಮ್ಮ ಕಲೆ, ಸಂಸ್ಕೃತಿ, ಆಹಾರ, ವಿಚಾರಗಳ ಜೊತೆಯಲ್ಲಿ ನಮ್ಮ ಆಚರಣೆಗಳನ್ನು ಜಗತ್ತಿಗೆ ತೋರಿಸಿ, ಆಸಕ್ತರಿಗೆ ಅವಕಾಶವನ್ನು ಒದಗಿಸುವಂತದ್ದು, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಅಂತಹ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಸಂತಸದ ವಿಷಯ” ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಪ್ರವಾಸೋದ್ಯಮ ಉಪ ನಿರ್ದೇಶಕ ಎನ್ ಮಾಣಿಕ್ಯ, ದಾಯ್ಜಿವಲ್ಡ್ ನ್ಯೂಸ್‌ನ ವಾಲ್ಟರ್ ನಂದಳಿಕೆ, ಜನಪದ ತಜ್ಞ ಮುಕೇಶ್ ಪಂಬದ, ಸಾವಯವ ಬಳಗದ ರತ್ನಾಕರ್ ಉಪಸ್ಥಿತರಿದ್ದರು.
ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಾವಯವ ಬಳಗದ ಸದಸ್ಯರು ಆಟಿ ಕಷಾಯ ಹಾಗೂ ಮೆಂತೆ ಗಂಜಿ ವಿತರಣೆಯಲ್ಲಿ ಸಹಕರಿಸಿದರು. ಸುಮಾರು 3೦೦ಕ್ಕೂ ಅಧಿಕ ಜನರು ಉಚಿತ ಆಟಿ ಕಷಾಯ ಹಾಗೂ ಮೆಂತೆ ಗಂಜಿಯನ್ನು ಸ್ವೀಕರಿಸಿದರು.