Home ಕರಾವಳಿ ಮಂಗಳೂರು: ಮುದ್ರಾ ಸಾಲ ಕೊಡಿಸುವ ನೆಪದಲ್ಲಿ ₹20 ಲಕ್ಷ ವಂಚನೆ

ಮಂಗಳೂರು: ಮುದ್ರಾ ಸಾಲ ಕೊಡಿಸುವ ನೆಪದಲ್ಲಿ ₹20 ಲಕ್ಷ ವಂಚನೆ

0

ಮಂಗಳೂರು: ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಅನೇಕರಿಂದ ಹಣ ಪಡೆದು ವಂಚಿಸಿದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


‘ನಾನು ಕೆಲಸಕ್ಕೆ ಹೋಗಲು ಬಜಾಲ್‌ ಕ್ರಾಸ್‌ ಬಳಿ ನಿಂತಿದ್ದಾಗ ಎರಡು ವರ್ಷಗಳ ಹಿಂದೆ ಪ್ರಕಾಶ್ ಪೂಜಾರಿ ಎಂಬ ವ್ಯಕ್ತಿಯ ಪರಿಚಯವಾಗಿತ್ತು.

ಬ್ಯಾಂಕ್‌ ಸಾಲ ತೆಗೆಸಿಕೊಡುವ ಏಜೆಂಟ್‌ ಆಗಿದ್ದೇನೆ ಎಂದು ಆತ ಹೇಳಿಕೊಂಡಿದ್ದ. ಸಣ್ಣ ವ್ಯಾಪಾರ ಮಾಡಲು, ರಾಷ್ಟ್ರೀಕೃತ ಬ್ಯಾಂಕಿನಿಂದ ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಕೊಡಿಸುತ್ತೇನೆ. ₹ 15 ಲಕ್ಷ ಸಾಲ ಕೊಡಿಸುವ ಖರ್ಚಿಗೆ ₹1.5 ಲಕ್ಷ ನೀಡಬೇಕು ಎಂದು ಹೇಳಿದ್ದರು. ಅಷ್ಟು ಹಣವನ್ನು ಅವರ ಖಾತೆಗೆ ನೆಫ್ಟ್‌ ಮೂಲಕ ಕಳುಹಿಸಿದ್ದೇನೆ. ಆದರೂ ಸಾಲ ಮಂಜೂರಾಗಿರಲಿಲ್ಲ. ಅವರ ಫೋನ್‌ ಕೂಡಾ ಸ್ವಿಚ್‌ ಆಪ್‌ ಆಗಿತ್ತು. ಅವರ ಮನೆಗೆ ಹೋಗಿ ವಿಚಾರಿಸಿದ್ದೆ. ಪ್ರಕಾಶ್ ಪೂಜಾರಿ ಮನೆಗೆ ಬಾರದೆ ಎರಡು ವರ್ಷ ಕಳೆದಿದೆ ಎಂದು ಆತನ ಪತ್ನಿ ಹಾಗೂ ತಾಯಿ ತಿಳಿಸಿದ್ದರು ಎಂದು ಅನಿಲ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪ್ರಕಾಶ್ ಹಾಗೂ ಆತನ ಪತ್ನಿ ವನಿತಾ ಅವರೂ ವಂಚನೆಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಮುದ್ರಾ ಯೋಜನೆ ಸಾಲ ಕೊಡಿಸುವ ಭರವಸೆ ನೀಡಿ ಅವರು ಅನೇಕರಿಂದ ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ. ಆರೋಪಿಗಳಿಬ್ಬರು ದಿಶಾ ಡಿ. ನಾಯಕ್ ಅವರಿಂದ ₹ 1.5 ಲಕ್ಷ, ಸುನೀಲ್ ಅವರಿಂದ ₹ 50ಸಾವಿರ, ವೇದಾ ಅವರಿಂದ ₹ 1 ಲಕ್ಷ, ಸ್ವಾತಿ ಎಂ ಅವರಿಂದ ₹ 4.50 ಲಕ್ಷ, ನರೇಂದ್ರ ಶೆಟ್ಟಿ ಅವರಿಂದ ₹ 5 ಲಕ್ಷ, ವೀಣಾ ನಾಯಕ್ ಅವರಿಂದ ₹ 1 ಲಕ್ಷ, ಮಹೇಶ್ ಮೇಸ್ತ ಅವರಿಂದ ₹ 1 ಲಕ್ಷ, ಕಾರ್ತಿಕ್ ₹ 1 ಲಕ್ಷ, ಲೀಲಾವತಿ ಅವರಿಂದ ₹ 2 ಲಕ್ಷ, ನಿತ್ಯಾನಂದ ಮೇಸ್ತ ಅವರಿಂದ ₹ 1.50 ಲಕ್ಷ ಸೇರಿ ಒಟ್ಟು ₹ 20.50 ಲಕ್ಷ ಹಣ ಪಡೆದು ವಂಚಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here