Home ಕರಾವಳಿ ನಿಫಾ ರೋಗಿಯ ಆರೈಕೆ ಮಾಡಿದ ಕಡಬದ ಯುವಕ ಕೋಮಾದಲ್ಲಿ-ಯುವಕನಿಗೂ ತಗಲಿದ ನಿಫಾ ವೈರಸ್‌ ಸೋಂಕು

ನಿಫಾ ರೋಗಿಯ ಆರೈಕೆ ಮಾಡಿದ ಕಡಬದ ಯುವಕ ಕೋಮಾದಲ್ಲಿ-ಯುವಕನಿಗೂ ತಗಲಿದ ನಿಫಾ ವೈರಸ್‌ ಸೋಂಕು

0

ಕಡಬ: ನಿಫಾ ವೈರಸ್ ಬಾಧಿಸಿದ್ದ ರೋಗಿಯನ್ನು ಕೇರಳದ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದ ಕಡಬದ ಮೇಲ್‌ನರ್ಸ್ ಕೊನೆಗೆ ತಾನೇ ನಿಫಾ ವೈರಸ್‌ಗೆ ತುತ್ತಾಗಿ ಕಳೆದ 8 ತಿಂಗಳಿನಿಂದ‌ ಕೋಮಾದಲ್ಲಿರುವ ದಾರುಣ ಸ್ಥಿತಿಗೆ ತಲುಪಿದ್ದಾರೆ.


ಕಡಬ ತಾಲೂಕಿನ ಮರ್ದಾಳ ಬಳಿಯ ತುಂಬ್ಯ ನಿವಾಸಿ ಬಿಎಸ್‌ಸಿ ನರ್ಸಿಂಗ್ ಪದವೀಧರ 24 ವರ್ಷದ ಟಿಟ್ಟೋ ತೋಮಸ್ ಕೇರಳದ ಕೋಝಿಕ್ಕೋಡ್‌ನ ಇಕ್ರಾ ಇಂಟರ್‌ನ್ಯಾಶನಲ್ ಹಾಸ್ಪಿಟಲ್‌ ಆ್ಯಂಡ್ ರೀಸರ್ಚ್‌ ಸೆಂಟರ್‌ನಲ್ಲಿ‌ ಮೇಲ್‌ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ನಿಫಾ ವೈರಸ್ ಬಾಧಿತ ರೋಗಿಯೊಬ್ಬರು ಈ ಆಸ್ಪತ್ರೆಗೆ ದಾಖಲಾಗಿದ್ದು, ಟಿಟ್ಟೊ ಥೋಮಸ್‌ ಅವರ ಆರೈಕೆ ಮಾಡಿದ್ದರು. ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದ ಟಿಟ್ಟೊಗೆ ತಲೆನೋವು ಬರಲಾರಂಭಿಸಿತ್ತು. ಡಿಸೆಂಬರ್‌ನಲ್ಲಿ ಊರಿಗೆ ಬಂದಿದ್ದ ಅವರು ಸಣ್ಣಗೆ ಬರುತ್ತಿದ್ದ ತಲೆನೋವನ್ನು ನಿರ್ಲಕ್ಷಿಸಿದ್ದರು.

ಮರಳಿ ಕೆಲಸಕ್ಕೆ ಹೋದಾಗ ತಲೆನೋವು ಜೋರಾಗಿದ್ದು, ಅದೇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರಿಗೂ ನಿಫಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟು ಇದಕ್ಕೆ ಚಿಕಿತ್ಸೆ ನೀಡಲಾಗಿತ್ತು. ನಿಫಾ ಗುಣವಾದರೂ ಅದರ ಪಾರ್ಶ್ವ ಪರಿಣಾಮವಾಗಿ ಲೇಟೆಂಟ್‌ ಎನ್ಸೆಫಲಿಟಿಸ್‌ ಎಂಬ ಸಮಸ್ಯೆಯಿಂದ ಟಿಟ್ಟೊ ಬಳಲುತ್ತಿದ್ದಾರೆ.ರೋಗಿಗೆ ಚಿಕಿತ್ಸೆ ನೀಡಿದ ಎರಡು ತಿಂಗಳ ಬಳಿಕ ವಿಪರೀತ ತಲೆನೋವು ಆರಂಭವಾಗಿದ್ದು, ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ‌ ಸ್ಟ್ರೋಕ್ ಆಗಿರುವುದು ಬೆಳಕಿಗೆ ಬಂದಿದೆ.

ಚಿಕಿತ್ಸೆಗೆ ಸ್ಪಂದಿಸದೆ ಮಾರನೇ ದಿನವೇ ಟಿಟ್ಟೊ ಕೋಮಾಕ್ಕೆ ಜಾರಿದ್ದರು. ಇದೇ ಸ್ಥಿತಿಯಲ್ಲಿ ಕಳೆದ ಎಂಟು ತಿಂಗಳಿನಿಂದ‌ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆಯೇ ಸುಮಾರು 40‌ ಲಕ್ಷ ರೂ. ಖರ್ಚು ಭರಿಸಿದೆ. ಆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ.ಕೃತಕ ಉಸಿರಾಟದ ಮೇಲೆ ಅವರ ಜೀವ ನಿಂತಿದೆ. ಹೀಗಾಗಿ ಬೇರೆ ಆಸ್ಪತ್ರೆಗೆ ಹೆಚ್ಚಿನ ದಾಖಲಿಸಿ ಚಿಕಿತ್ಸೆ ನೀಡಲು ಆಗ್ರಹಿಸಿ ಕುಟುಂಬಸ್ಥರು ಕೇರಳ ಸರ್ಕಾರದ ಮೊರೆ ಹೋಗಿದ್ದಾರೆ. ಕೆಳ ಮಧ್ಯಮ ವರ್ಗದ ಟಿಟ್ಟೊ ಕುಟುಂಬ ಚಿಕಿತ್ಸೆ ಖರ್ಚನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಅವರ ಸಹೋದರ ಶಿಜೊ ಥೋಮಸ್‌ ಇದ್ದ ನೌಕರಿ ಬಿಟ್ಟು ತಮ್ಮನ ಆರೈಕೆಗಾಗಿ ಓಡಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here