ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನುಭೇಟಿ ಮಾಡಿದ್ದಾರೆ.
ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಇಬ್ಬರು ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರ ಪರವಾಗಿ ರಾಜ್ಯಾದ್ಯಂತ ಅಭಿಮಾನ ಹೆಚ್ಚುತ್ತಲೇ ಇದೆ. ನಿನ್ನೆ ರಾಮನಗರದಲ್ಲಿ ಕರಗ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುವಾಗ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಘೋಷಣೆ ಕೂಗಿದ್ದರು.
ಇದಕ್ಕೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ನಾವು ಕಾನೂನಿಗೆ ಬೆಲೆ ನೀಡಬೇಕು. ಹಾಗೆಯೇ ತಪ್ಪು ಮಾಡಿದವರನ್ನು ರಕ್ಷಣೆ ಮಾಡುವುದಿಲ್ಲ. ದರ್ಶನ್ ಪ್ರಕರಣದಲ್ಲಿ ನ್ಯಾಯೋಚಿತ ರೀತಿ ನಡೆದುಕೊಳ್ಳಲಾಗುವುದು. ದರ್ಶನ್‌ರವರ ಪತ್ನಿ ತಮ ಭೇಟಿ ಗೆ ಸಮಯ ಕೇಳಿದ್ದಾರೆ ಎಂದು ಹೇಳಿದ್ದರು. ಅದರಂತೆ ಇಂದು ಬೆಳಿಗ್ಗೆ ವಿಜಯಲಕ್ಷ್ಮಿ ಹಾಗೂ ದಿನಕರ್ ತೂಗುದೀಪ್ ಅವರು ಡಿ.ಕೆ.ಶಿವಕುಮಾರ್ ಅವರನ್ನುಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ವಿಜಯಲಕ್ಷ್ಮಿ ಮತ್ತು ದಿನಕರ್ ಅವರ ಭೇಟಿ ವಿಚಾರ ಯಾವ ಕಾರಣಕ್ಕೆ ಎಂಬ ಅನುಮಾನಗಳು ಮೂಡಿವೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್ ಮತ್ತು ಅವರ ತಂಡ ಈವರೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಇತ್ತ ಪೊಲೀಸರು ಪ್ರಕರಣದ ತನಿಖೆಯನ್ನು ಭಾಗಶಃ ಮುಗಿಸಿದ್ದು, ಮೊದಲ ಹಂತದ ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಂತದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ದರ್ಶನ್ ಕುಟುಂಬದ ಸದಸ್ಯರ ಭೇಟಿ ಕುತೂಹಲ ಕೆರಳಿಸಿದೆ.