ಸುಳ್ಯ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟಿ ನಡುವಿನ ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು (68) ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಳ್ಯದ ಸೋಣಂಗೇರಿ ಸಮೀಪದ ಸುತ್ತುಕೋಟೆಯಲ್ಲಿ ನಡೆದಿದೆ.
ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತವಾಗಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿಯಾಗಿರುವ ರಾಮಚಂದ್ರ ಪ್ರಭು ಅವರು ಪುತ್ರನ ವಿವಾಹ ಸಮಾರಂಭದ ಆಮಂತ್ರಣ ಪತ್ರ ವಿತರಣೆಗಾಗಿ ಪತ್ನಿ ಉಮಾವತಿ ಅವರೊಂದಿಗೆ ಸುಳ್ಯದತ್ತ ಬರುತ್ತಿದ್ದರು.
ದುಗಲಡ್ಕ ತಲುಪುವಷ್ಟರಲ್ಲಿ ಮಳೆ ಬಂದ ಕಾರಣ ಪತ್ನಿಯನ್ನು ಅಲ್ಲಿಯೇ ಇಳಿಸಿ ಬಸ್ಸಿನಲ್ಲಿ ಬರುವಂತೆ ತಿಳಿಸಿ ಸುಳ್ಯದತ್ತ ಬಂದರು. ಸುತ್ತುಕೋಟೆ ತಿರುವು ತಲುಪುವಷ್ಟರಲ್ಲಿ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಹೋಗುತ್ತಿದ್ದ ಸರಕಾರಿ ಬಸ್ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದ್ಲಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮಹಜರು ನಡೆಸಲಾಯಿತು. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿತ್ಯನಿಧಿ ಸಂಗ್ರಾಹಕರಾಗಿ, ಗ್ರಾ,ಪಂ. ಸದಸ್ಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡು ಊರಿನಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.