ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಲು 7 ಗಂಟೆ ಪ್ರಯತ್ನ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಂತಿಮವಾಗಿ ಆತನ ಮೃತ ದೇಹ ತೆಗೆಯಲ್ಲಷ್ಟೇ ಶಕ್ತವಾಗಿದೆ. ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಮೃತ ಕಾರ್ಮಿಕ
ಬಲ್ಮಠದ ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ ಅಪಾರ್ಟ್ಮೆಂಟ್ಸ್ ಕಟ್ಟಡದ ತಳಪಾಯದ ಪಿಲ್ಲರ್ ಪಕ್ಕದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಬುಧಾವರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಅದರಡಿ ಸಿಲುಕಿದ್ದರು.
ತಕ್ಷಣ ಜಿಲ್ಲಾಡಳಿತ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.
ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.
ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ “ಮಣ್ಣು ಕುಸಿತವಾಗಿ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದರು. NDRF, SDRF, ಅಗ್ನಿಶಾಮಕ ದಳದ ಮೂಲಕ ಕಾರ್ಯಚರಣೆ ನಡೆಸಿದ್ದೆವು. ತಡೆಗೋಡೆ ಬಳಿ ವಾಟರ್ ಫ್ರೂಫಿಂಗ್ ಕೆಲಸ ಮಾಡುತ್ತಿದ್ದರು. ಹಲಗೆಯ ಮೇಲೆ ಮಣ್ಣು ಬಿದ್ದಿತ್ತು. ಒಬ್ಬರು ಪ್ರಾರಂಭದಿಂದಲೂ ಮಾತನಾಡುತ್ತಿದ್ದರು. ಅವರನ್ನು ನಾಲ್ಕು ಗಂಟೆಗೆ ರೆಸ್ಕ್ಯೂ ಮಾಡಿದ್ದೆವು. ಇನ್ನೊಬ್ಬ ಕಾರ್ಮಿಕನ ಮೇಲೆ ಬಹಳ ದೊಡ್ಡ ಪ್ರಮಾಣದ ಮಣ್ಣು ಬಿದ್ದಿತ್ತು.ಕಾರ್ಯಾಚರಣೆಗೆ ಸ್ವಲ್ಪ ಸಮಯ ತೆಗೆದುಕೊಳ್ತು. ರಕ್ಷಣಾ ಕಾರ್ಯಚರಣೆ ಸಂದರ್ಭ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ” ಎಂದರು.