ಮಂಗಳೂರು: ಮಂಗಳೂರಿನಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸಂಭವಿಸುತ್ತಿದ್ದು, ಅದೆಷ್ಟೋ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ, ತಗ್ಗು ಪ್ರದೇಶಗಳು ಮುಳುಗಡೆಯಾಗುತ್ತಿದೆ.



ಇದೇ ಸಮಸ್ಯೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ವಾಸಿಸುವ ಜನರಿಗೆ ಕಾಡತೊಡಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.


ಹೀಗಾಗಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನ ನಿತ್ಯ ಸಾವಿರಾರು ಪ್ರಯಾಣಿಕರ ಆಗಮನವಾಗುತ್ತದೆ. ಇಂತಹ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಇಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಲು ಒಂದು ಬಲವಾದ ಕಾರಣವಿದೆ.
ಧಾರಾಕಾರ ಮಳೆಯಾದರೆ ಈ ವಿಮಾನ ನಿಲ್ದಾಣದ ಕೆಳ ಭಾಗದಲ್ಲಿರುವ ಜನರ ಬದುಕು ನರಕವಾಗುತ್ತದೆ. ಮನೆಯ ಒಳಗೆ ನೀರು ನುಗ್ಗಿ ಬದುಕು ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ಇದಕ್ಕೆ ನೇರ ಹೊಣೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಟೇಬಲ್ ಟಾಪ್ ಮಾದರಿಯ ಏರ್ಪೋರ್ಟ್ ಇದಾಗಿದ್ದು, ಇಲ್ಲಿ ಮಳೆ ನೀರು ಹರಿದು ಹೋಗಲು ವೈಜ್ಞಾನಿಕ ವ್ಯವಸ್ಥೆ ಇಲ್ಲ.
ಏರ್ಪೋರ್ಟ್ ನಿಂದ ಬೇಕಾ ಬಿಟ್ಟಿ ನೀರು ಹರಿಬಿಡುವ ಪರಿಣಾಮ ಕೆಳಗೆ ತಗ್ಗು ಪ್ರದೇಶದಲ್ಲಿರುವ ೭-೮ ಮನೆಗಳು ಮುಳುಗಡೆಯಾಗುತ್ತದೆ. ಮೊನ್ನೆ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಕರ್ಮರ್ ಅನ್ನೋ ಪ್ರದೇಶ ಮುಳುಗಡೆಯಾಗಿದೆ. ಕರ್ಮರ್ ಪ್ರದೇಶದ ಸುಮಾರು ೭-೮ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಇಲ್ಲಿ ಸ್ಥಳೀಯ ಪಿಜಿಯೊಂದಕ್ಕೆ ಆಹಾರ ತಯಾರು ಮಾಡುವ ಮನೆಯಿದ್ದು, ಇಲ್ಲಿ ನೀರು ನುಗ್ಗಿದ ಪರಿಣಾಮ ಸುಮಾರು ೧ ಲಕ್ಷ ಮೌಲ್ಯದ ಆಹಾರ ಪದಾರ್ಥ ನೀರಲ್ಲಿ ತೇಲಿ ಹೋಗಿದೆ. ಜೊತೆಗೆ ಜನ ಪ್ರಾಣ ಒತ್ತೆ ಇಟ್ಟು ಆತಂಕದಿಂದಲೇ ರಾತ್ರಿ ಕಳೆದಿದ್ದಾರೆ. ಇಷ್ಟೆಲ್ಲಾ ನಡೆದರೂ ಯಾವೊಬ್ಬ ಅಧಿಕಾರಿಯೂ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯರು ಶೀಘ್ರದಲ್ಲೇ ಪರಿಹಾರ ನೀಡದೆ ಹೋದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.