ರಾಜ್ಯದಲ್ಲಿ ಮಳೆಯ ಕಾರಣ ಜನ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಸಂಭವಿಸುತ್ತಿರುವಾಗಲೇ ಹಾವೇರಿಯಿಂದ ಭೀಕರ ಸುದ್ದಿಯೊಂದು ವರದಿಯಾಗಿದೆ. ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಳಿಕ ಭೀಕರ ರಸ್ತೆ ಅಪಘಾತ ನಡೆದಿದ್ದು, 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ್ದು, ಪರಿಣಾಮವಾಗಿ 13 ಜನರು ಮೃತಪಟ್ಟ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ (ಜೂನ್. 28) ಬೆಳಗ್ಗೆ ನಡೆದಿದೆ.
ಮೃತರು ಸವದತ್ತಿ ರಲ್ಲಮ್ಮನ ದರ್ಶನಕ್ಕೆ ತೆರಳಿದ್ದರು ಎಂದು ವರದಿಯಾಗಿದೆ. ದೇವಸ್ಥಾನದಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಮೃತರು ಶಿವಮೊಗ್ಗ ಮೂಲದ ನಿವಾಸಿಗಳು ಎನ್ನಲಾಗಿದೆ.
ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಪೊಲೀಸರು ಮೃತರ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದಾರೆ. ಘಟನೆಯಲ್ಲಿ ಓರ್ವ ಅಪ್ರಾಪ್ತರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಸುಭದ್ರಾ ಬಾಯಿ (65 ವರ್ಷ), ಪರಶುರಾಮ (45 ವರ್ಷ), ಭಾಗ್ಯ (40 ವರ್ಷ), ನಾಗೇಶ್ (50 ವರ್ಷ), ವಿಶಾಲಾಕ್ಷಿ (40 ವರ್ಷ), ಅರ್ಪಿತಾ (18 ವರ್ಷ), (ಪುಣ್ಯ 50 ವರ್ಷ), ಮಂಜುಳಾ ಬಾಯಿ (62 ವರ್ಷ), ಆದರ್ಶ (23 ವರ್ಷ), ಮಾನಸ (24 ವರ್ಷ), ರೂಪಾ (40 ವರ್ಷ), ಮಂಜುಳಾ (50 ವರ್ಷ) ಎಂದು ಗುರುತಿಸಲಾಗಿದೆ.