ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ ಎಂಬ ಸುದ್ದಿ ಭಾರಿ ಗೊಂದಲ ಉಂಟು ಮಾಡಿ ಕೊನೆಗೆ ಶವಗಾರಾದಲ್ಲಿ ಹೆಣ ಸಿಗದೆ ವ್ಯಕ್ತಿ ಇನ್ನೂ ಬದುಕಿದ್ದಾರೆ ಎಂಬ ಸುದ್ದಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶೇಖರ್ ಗೌಡ ಅವರು ವೆಂಕಪ್ಪ ಗೌಡ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಜೂನ್ 9ರಂದು ಸ್ಥಳೀಯ ಪೇಟೆಗೆ ಹೋದಾಗ ಮೆದುಳು ನರದ ಸಮಸ್ಯೆಯಿಂದ ಅನಾರೋಗ್ಯಕ್ಕೊಳಗಾಗಿ ಬಿದ್ದರು. ತಕ್ಷಣ ಅವರನ್ನು ಆಟೋ ರಿಕ್ಷಾದವರು ವೆಂಕಪ್ಪ ಗೌಡರಲ್ಲಿಗೆ ಕರೆತಂದಿದ್ದು, ವೆಂಕಪ್ಪ ಗೌಡರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ಜೂನ್ 15ರಂದು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಶೇಖರ್ ಗೌಡ ಅವರ ಸ್ಥಿತಿ ಗಂಭೀರವಾದ ಕಾರಣ ವೆನ್ಲಾಕ್ ಆಸ್ಪತ್ರೆಯಿಂದ ಮಂಗಳೂರು ದಕ್ಷಿಣ ಠಾಣೆಗೆ ವಾರಸುಧಾರರಿಗೆ ಮಾಹಿತಿ ನೀಡಲು ಪತ್ರ ರವಾನೆಯಾಗಿದೆ. ಅದರಲ್ಲಿ ಬರೆದಿರುವ ಮಾಹಿತಿ ಸರಿಯಾಗಿ ಓದಲು ಆಗದ ಕಾರಣ ಪೊಲೀಸ್ ಠಾಣೆಯವರು ಶೇಖರ್ ಗೌಡ ಸಾವನಪ್ಪಿದ್ದಾರೆ ಎಂದು ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದರು. ಧರ್ಮಸ್ಥಳ ಠಾಣೆಯ ಪೊಲೀಸರು ಆ ರೋಗಿಯ ಬಂಧುಗಳಿಗೆ ಮಾಹಿತಿ ನೀಡಿದ್ದರು. ರೋಗಿಯ ಬಂಧುಗಳು ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಅಂತಹ ವ್ಯಕ್ತಿ ಮೃತಪಟ್ಟಿಲ್ಲ ಎಂದು ಗೊತ್ತಾಗಿತ್ತು. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಅವರ ಬಂಧುಗಳು ನಿಟ್ಟುಸಿರು ಬಿಟ್ಟಿದ್ದರು.