ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಆಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಂಡಂತೆ ಹೊಸ ವಿಚಾರಗಳು ಹೊರ ಬರುತ್ತಿವೆ. ಪ್ರಕರಣದ ವಿಚಾರಣೆ ತೀವ್ರಗೊಂಡಂತೆ ಡಿ ಗ್ಯಾಂಗ್ನ ಕರಾಳ ಮುಖ ಬೆಳಕಿಗೆ ಬರುತ್ತಿದ್ದು, ರೇಣುಕಸ್ವಾಮಿಗೆ ಹೇಗೆಲ್ಲಾ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ವಾದ-ಪ್ರತಿವಾದವನ್ನು ಆಲಿಸಿದ ಬಳಿಲ ಐದು ದಿನಗಳ ಕಾಲ ಕಸ್ಟಡಿ ಅವಧಿ ವಿಸ್ತರಿಸಿ ಆದೇಶಿಸಿದ್ದಾರೆ ಇನ್ನು ಕೋರ್ಟ್ ವಿಚಾರಣೆ ವೇಳೆ ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರಾಗಿ ನೇಮಕವಾಗಿರುವ ಪ್ರಸನ್ನಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಗಮನಕ್ಕೆ ವಿಚಾರ ಒಂದನ್ನು ತಂದಿದ್ದು, ಡಿ ಗ್ಯಾಂಗ್ನ ಕರಾಳ ಮುಖ ಬೆಳಕಿಗೆ ಬಂದಿದೆ.
ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳು ರೇಣುಕಸ್ವಾಮಿಗೆ ಕರೆಂಟ್ ಶಾಕ್ ನಿಡಿದ್ದು, ಹತ್ಯೆ ನಡೆದ ಜಯಣ್ಣ ಶೆಡ್ನಲ್ಲಿದ್ದ ಮೆಗ್ಗರ್ ಯಂತ್ರವನ್ನು ಪೊಲೀಸರು ವಶಪಡಿಸಕೊಳ್ಳಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಕೆಲವೆಡೆ ಮಹಜರು ಮಾಡಬೇಕಿದ್ದು, ಆರೋಪಿಯ ಬಟ್ಟೆ, ಚಪ್ಪಲಿ ಸೇರಿಚಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಬೇಕಿದೆ. ಹೀಗಾಗಿ ನ್ಯಾಯಾಲಯ ತಮ್ಮ ಮನವಿಯನ್ನು ಪುರಸ್ಕರಿಸುವಂತೆ ವಕೀಲ ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ.
ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಹಲ್ಲೆ ಮಾಡಲಾಗಿದೆ, ಕೃಷ ದೇಹಿಯಾಗಿದ್ದ ರೇಣುಕಾ ಸ್ವಾಮಿಯನ್ನು ಎತ್ತಿ ಗೋಡೆಗೆ ಹೊಡೆಯಲಾಗಿದೆ, ಸಿಗರೇಟಿನಿಂದ ದೇಹದ ಮೇಲೆ ಸುಡಲಾಗಿದೆ. ತಲೆಯನ್ನು ಬಲವಾಗಿ ಟ್ಯಾಂಕರ್ ವಾಹನಕ್ಕೆ ಹೊಡೆಯಲಾಗಿದೆ. ಇದೆಲ್ಲದರ ಬಳಿಕ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಮಾಯಕ ಕೂಲಿ ಕೆಲಸದವರನ್ನು ಪುಸಲಾಯಿಸಿ ಹತ್ಯೆ ಆರೋಪವನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಅಂತಿಮವಾಗಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ.