ಸರೋವರ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಇತಿಹಾಸ ಪ್ರಸಿದ್ಧ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ಸಂಜೆ (ಜೂ 14) ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆದಿದೆ. ಮರಿ ಬಬಿಯಾನ ಪೂರ್ಣ ದರ್ಶನದಿಂದ ಭಕ್ತ ಮಹಾಶಯರು ಪುಳಕಿತರಾಗಿದ್ದಾರೆ.



ಮರಿ ಬಬಿಯಾ ವಿಶ್ರಾಂತಿ ಪಡೆಯಲು ಬಂದ ಸಮಯದಲ್ಲಿ ಕ್ಷೇತ್ರದ ನಡೆ (ದಾರಿ) ಮುಚ್ಚಿತ್ತು. ಸಂಜೆ ಬಂದು ಕ್ಷೇತ್ರದ ನಡೆ ತೆರೆದ ದೇವಾಲಯದ ಅರ್ಚಕರಿಗೆ ಈ ಪುಣ್ಯ ದೃಶ್ಯ ಗೋಚರವಾಗಿದ್ದು, ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಹಂಚಿದ್ದಾರೆ.


ಈ ಹಿಂದೆ ಇಲ್ಲಿನ ಸರೋವರಲ್ಲಿ ವಾಸವಿದ್ದ 78ರ ಹರೆಯದ ಬಬಿಯಾ ಮೊಸಳೆ 2022ರ ಅಕ್ಟೋಬರ್ 9ರಂದು ದೇಹ ತ್ಯಜಿಸಿತ್ತು. ಬಳಿಕ ಕಳೆದ ವರ್ಷ ಮರಿ ಕಾರಣಿಕ ಎಂಬಂತೆ ಮೊಸಳೆಯೊಂದು ಸರೋವರಲ್ಲಿ ಪ್ರತ್ಯಕ್ಷವಾಗಿತ್ತು. ಈ ಮರಿ ಮೊಸಳೆಗೂ ಬಬಿಯಾ ಎಂದೇ ನಾಮಕರಣ ಮಾಡಲಾಗಿತ್ತು.
ಆರಂಭದಲ್ಲಿ ಭಕ್ತರಿಗೆ ಕಾಣಿಸದೆ ಸರೋವರದಲ್ಲಿದ್ದ ಮರಿ ಮೊಸಳೆ ಶುಕ್ರವಾರ ದಿಢೀರನೆ ದೇವಳದ ಪ್ರಾಂಗಣಕ್ಕೆ ಬಂದಿದೆ. ಈ ಮೂಲಕ ಸ್ಪಷ್ಟವಾಗಿ ದೇವಾಲಯದ ಗರ್ಭಗುಡಿ ಸಮೀಪವೇ ಪ್ರತ್ಯಕ್ಷವಾಗಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದೆ.
ಪ್ರಾಂಗಣದ ಗರ್ಭಗುಡಿಯ ಹೊರಗೆ ಮರಿ ಮೊಸಳೆ ವಿಶ್ರಾಂತಿ ಪಡೆದಿದ್ದು, ಮರುದಿನ ಶನಿವಾರವೂ ಬೆಳಗ್ಗೆ ಮತ್ತೆ ಪ್ರಾಂಗಣಕ್ಕೆ ಬಂದು ಕಾವಲು ಭಟನಂತೆ ವಿಶ್ರಾಂತಿ ಪಡೆದಿದೆ. ಈ ಮರಿ ಮೊಸಳೆಯನ್ನು ಭಕ್ತರು ದೇವರ ಪ್ರತಿರೂಪ ಎಂದೇ ಕಾಣುತ್ತಿದ್ದು, ಕ್ರೂರ ಸ್ವಭಾವದ ಈ ಪ್ರಾಣಿ ಇಲ್ಲಿ ಸೌಮ್ಯದಿಂದ ಇರುವುದು ಕ್ಷೇತ್ರದ ಕಾರಣಿಕಕ್ಕೆ ಸಾಕ್ಷಿಯಾಗಿದೆ ಎಂದು ಭಕ್ತಾದಿಗಳು ಹೇಳುತ್ತಿದ್ದಾರೆ.
ಮರಿ ಮೊಸಳೆ ಕಾಣಿಸಿದ್ದು ಯಾವಾಗ ?
ಕಳೆದ ವರ್ಷ ನ .7 ರಂದು ಕಾಞಂಗಾಡಿನ ಕುಟುಂಬವೊಂದು ಅನಂತ ಪದ್ಮನಾಭನ ಸನ್ನಿಧಾನಕ್ಕೆ ಬಂದಿತ್ತು. ಆಗ ಅವರ ಜೊತೆಗಿದ್ದ ಮಗು, ಮೊಸಳೆ ನೋಡಬೇಕೆಂದು ಹಠ ಹಿಡಿಯಿತು. ಮೊಸಳೆ ಇಲ್ಲ, ಈ ಹಿಂದೆ ಇದ್ದ ಬಬಿಯಾ ಮೊಸಳೆ ದೇಹ ತ್ಯಜಿಸಿರುವ ವಿಷಯ ತಿಳಿಸಿದರೂ, ಮಗು ಹಠ ಬಿಡಲಿಲ್ಲ. ಇದೇ ಸಂದರ್ಭದಲ್ಲಿ ಪವಾಡ ಎಂಬಂತೆ ಗುಹೆಯಿಂದ ಮೊಸಳೆ ಹೊರ ಬಂದು ದರ್ಶನ ನೀಡಿತು. ಕುಟುಂಬ ಸದಸ್ಯರು ಆ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ತೋರಿಸಿದರು. ಕೂಡಲೇ ಸರೋವರದ ಬಳಿ ಬಂದರೆ ಅದಾಗಲೇ ಮೊಸಳೆ ಮಾಯವಾಗಿತ್ತು.
ಮೊಸಳೆಯನ್ನು ಮೊದಲ ಬಾರಿ ಕಂಡ ಕುಟುಂಬ ಮತ್ತೆ ಕೆಲ ದಿನಗಳ ಅಂತರದಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದು, ಆಗ ಮತ್ತೆ ಅವರಿಗೆ ಮೊಸಳೆಯ ದರ್ಶನವಾಗಿದೆ. ಈ ವೇಳೆ ಅಲ್ಲಿ ಬಹಳಷ್ಟು ಮಂದಿ ನೆರೆದಿದ್ದು, ಅವರಿಗೂ ಕೂಡ ಮೊಸಳೆ ದರ್ಶನ ಭಾಗ್ಯ ನೀಡಿತು.