Home ತಾಜಾ ಸುದ್ದಿ ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ

ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ

0

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಎಂಬ ಯುವಕನನ್ನು ಅಪಹರಿಸಿ, ಮನಬಂದಂತೆ ಥಳಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನವಾಗಿರುವ ನಟ ದರ್ಶನ್​ ಹಾಗೂ ಅವರ ಸಹಚರರ ವಿರುದ್ಧ ನಟಿ ರಮ್ಯಾ ಗುಡುಗಿದ್ದಾರೆ. ದರ್ಶನ್​ಗೆ ಅಷ್ಟು ದೊಡ್ಡ ಅಭಿಮಾನಿ ಬಳಗವಿದೆ ಅನ್ನೋದೇ ಸುಳ್ಳು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಮ್ಯಾ, ದರ್ಶನ್​ರನ್ನು ತುಂಬಾ ಹೈಪ್​ ಮಾಡುವಷ್ಟು ಫ್ಯಾನ್​ ಫಾಲೋಯಿಂಗ್​ ಇಲ್ಲ. ಒಂದು ವೇಳೆ ಅಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರೆ ದರ್ಶನ್​ ಅವರ ಎಲ್ಲ ಸಿನಿಮಾಗಳು ಕೂಡ ಸಕ್ಸಸ್​ ಆಗಬೇಕಿತ್ತು. ಕಳೆದ 6 ತಿಂಗಳಿಂದ ಕೆಲ ರಾಜಕಾರಣಿಗಳಿಗೆ ದರ್ಶನ್​ ಪ್ರಚಾರ ಸಹ ಮಾಡಿದ್ದರು. ಅವರಲ್ಲಿ ಕೆಲವರು ಚುನಾವಣೆಯಲ್ಲಿ ಸೋತಿದ್ದಾರೆ. ಠಾಣೆಯ ಮುಂದೆ 20 ರಿಂದ 50 ಮಂದಿ ನಿಂತ ಮಾತ್ರಕ್ಕೆ ದರ್ಶನ್​ಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗ ಇದೆ ಅಂದುಕೊಳ್ಳೋದು ಸರಿಯಲ್ಲ ಎಂದು ರಮ್ಯಾ ಹೇಳಿದರು.

ಅಲ್ಲದೆ, ದರ್ಶನ್​ ಸುತ್ತಮುತ್ತ ಇರುವವರೆಲ್ಲ ನಟೋರಿಯಸ್​ಗಳು. ಅವರೆಲ್ಲ ಅಕ್ಷರಶಃ ರೌಡಿಗಳು. ಹೀಗಾಗಿ ಆತ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಆದರೆ, ಜನರು ಮಾತನಾಡುವಂತೆ ದರ್ಶನ್​ಗೆ ಅಷ್ಟೊಂದು ಅಭಿಮಾನಿ ಬಳಗ ಇಲ್ಲ ಮತ್ತು ಜನರು ಆತನ ಮೇಲೆ ಅಷ್ಟೊಂದು ಪ್ರೀತಿ ಸಹ ತೋರುತ್ತಿಲ್ಲ. ಬೇರೆ ನಟರಿಗೆ ದರ್ಶನ್​ಗಿಂತಲೂ ಹೆಚ್ಚು ಅಭಿಮಾನಿ ಬಳಗವಿದೆ. ಇತರ ನಟರ ಅಭಿಮಾನಿಗಳು ನೇತ್ರದಾನ, ರಕ್ತದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ದರ್ಶನ್ ಅಭಿಮಾನಿಗಳು ಜನರನ್ನು ಅಪಹರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ದರ್ಶನ್​ ತಮ್ಮ ಫ್ಯಾನ್​ ಕ್ಲಬ್​ ಮೂಲಕ ಜನರನ್ನು ಅಪಹರಿಸುವುದು ಮತ್ತು ಇತರರ ಮೇಲೆ ಹಲ್ಲೆ ಮಾಡುವುದನ್ನು ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ರಮ್ಯಾ ಕಿಡಿಕಾರಿದರು.

ಈ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಡಿ-ಗ್ಯಾಂಗ್​ ಬಗ್ಗೆ ರಮ್ಯಾ ಕಿಡಿಕಾರಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಯಾವುದೇ ವ್ಯಕ್ತಿಯನ್ನು ಬ್ಲಾಕ್​ ಮಾಡುವ ಆಯ್ಕೆ ಇದೆ. ಒಂದು ವೇಳೆ ಟ್ರೋಲ್​ ಮುಂದುವರಿದರೆ ನೀವು ದೂರು ನೀಡಬಹುದು. ನನ್ನನ್ನು ಕೂಡ ಕೆಟ್ಟ ಪದಗಳಿಂದ ಟ್ರೋಲ್​ ಮಾಡಿದ್ದರು. ನನ್ನನ್ನು ಮಾತ್ರವಲ್ಲದೇ ಅನೇಕ ನಟ-ನಟಿಯರನ್ನು ಟ್ರೋಲ್​ ಮಾಡಿದ್ದಾರೆ. ಅದಲ್ಲದೆ ಅವರ ಹೆಂಡತಿ, ಮಕ್ಕಳನ್ನೂ ಟ್ರೋಲ್ ಮಾಡಿದ್ದಾರೆ. ಎಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಕಾನೂನು ಪಾಲಿಸುವ ಯಾವುದೇ ಪ್ರಜೆಯ ರೀತಿ ನಾನು ಕೂಡ ದೂರು ನೀಡಿದ್ದೇನೆ. ಅಂಥವರಿಗೆ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪಾಪ ಅಂತ ನಾನು ಕೇಸ್​ ವಾಪಸ್​ ತೆಗೆದುಕೊಂಡಿದ್ದೇನೆ. ಟ್ರೋಲ್​ ಮಾಡಿದ ವ್ಯಕ್ತಿಗಳು ಇನ್ನೂ ಚಿಕ್ಕವರು. ಅವರಿಗೂ ಭವಿಷ್ಯ ಇದೆ. ಯಾವುದೋ ಅನಾಮಧೇಯ ಖಾತೆಗಳ ಮೂಲಕ ಅವರು ಟ್ರೋಲ್​ ಮಾಡುತ್ತ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆ ತೆಗೆದುಕೊಳ್ಳಬಾರದು. ನೀವು ಹೋಗಿ ಜನರನ್ನು ಹೊಡೆದು ಕೊಲ್ಲುವುದಲ್ಲ. ಒಂದು ಸರಳವಾದ ದೂರು ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಅಧಿಕಾರಿಗಳಿಗೆ ನಾನು ಮೆಚ್ಚುಗೆ ಮತ್ತು ಗೌರವ ಸಲ್ಲಿಸುತ್ತೇನೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ ಎಂದು ನಟಿ ರಮ್ಯಾ ಪೋಸ್ಟ್​ ಮಾಡಿದ್ದರು.

ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

LEAVE A REPLY

Please enter your comment!
Please enter your name here