ಮಂಗಳೂರು: ನವಯುಗ ನವಪಥದ ಆಧಾರದಲ್ಲಿ ಹಿಂದುತ್ವಕ್ಕೆ ಬದ್ಧತೆಯಿರಿಸಿ, ಅಭಿವೃದ್ಧಿಯನ್ನು ಆದ್ಯತೆಯಾಗಿರಿಸಿ ದ.ಕ.ಜಿಲ್ಲೆಯಲ್ಲಿ ಹೊಸಪರ್ವ, ಹೊಸಕನಸು, ಹೊಸ ಆಶೋತ್ತರಗಳನ್ನು ಜನರ ಮಧ್ಯೆ ಹುಟ್ಟಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ದ.ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದರು. ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಸುರತ್ಕಲ್ ನ ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆಯ ಬಿಜೆಪಿಯ ಗೆಲುವು, ಮೋದಿಯವರ, ಹಿಂದುತ್ವದ, ಸಂಘಟನೆಯ ಕಾರ್ಯಕರ್ತರ, ಜಿಲ್ಲಾಧ್ಯಕ್ಷರ ಗೆಲುವು. ಸತ್ಯ, ಧರ್ಮ, ನ್ಯಾಯ, ಹಿಂದುತ್ವದ ಆಧಾರದಲ್ಲಿ ನಾವು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿದ್ದೆವು. ತುಳುನಾಡಿನ ದೈವ ದೇವರ ಆಶೀರ್ವಾದದ ಬಲದಿಂದ, ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಹಾಗೂ ಕೇಂದ್ರದ ನಾಯಕರ ಬೆಂಬಲದೊಂದಿಗೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದರು. ಈ ಚುನಾವಣೆಯನ್ನು ಕಾಂಗ್ರೆಸ್ ಎಸ್ ಡಿ ಪಿ ಐ ಒಟ್ಟಾಗಿ ಎದುರಿಸಿದೆ. ಆದರೆ ಚುನಾವಣಾ ಅಂತರದ ಬಗ್ಗೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ಬ್ರಿಜೇಶ್ ಚೌಟ ಹೇಳಿದರು.