ಕಾಪು: ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ ಸಂದರ್ಭ ಮತ್ತೋರ್ವ ಆರೋಪಿಯ ಬಗ್ಗೆ ಪ್ರಧಾನ ಆರೋಪಿ ಯೋಗೀಶ್ ಆಚಾರ್ಯ ಬಾಯ್ಬಿಟ್ಟಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೆ. 5 2023ರಂದು ಪಾಂಗಾಳ ಶರತ್ ಶೆಟ್ಟಿ ಹತ್ಯೆಯಾಗಿತ್ತು. ಹತ್ಯೆಗೆ ಸಂಬಂಧಿಸಿದಂತೆ ಕಾಪು ಪೊಲೀಸರು ಆರೋಪಿಗಳಾದ ದಿವೇಶ್, ಲಿಖೀತ್, ನಾಗರಾಜ್ ಮತ್ತು ಸಹಕರಿಸಿದ್ದ ಆಕಾಶ್ ಕರ್ಕೇರ, ಮುಕೇಶ್, ಪ್ರಸನ್ನ ಶೆಟ್ಟಿ ಅವರನ್ನು ಬಂಧಿಸಿದ್ದರು. ಬಂಧಿತರ ಜತೆಗೆ ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಯೋಗೀಶ್ ಆಚಾರ್ಯ ವಿರುದ್ಧವೂ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಆರೋಪಿಗಾಗಿ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದರೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಈ ಸಂದರ್ಭದಲ್ಲಿ ಶರತ್ ಶೆಟ್ಟಿ ಮನೆಯವರು ಹತ್ಯಾ ಆರೋಪಿಯ ಪತ್ತೆಗಾಗಿ ತಮ್ಮ ಕುಟುಂಬದ ವರ್ತೆ – ಪಂಜುರ್ಲಿ ದೈವಗಳ ಮೊರೆ ಹೋಗಿದ್ದರು. ಆರೋಪಿ ಪಾತಾಳದಲ್ಲೇ ಇದ್ದರೂ ಆತನನ್ನು ಹುಡುಕಿ ತರುತ್ತೇವೆ ಎಂದು ದೈವಗಳು ಅಭಯ ನೀಡಿದ್ದವು.
ಪ್ರಕರಣದ ಬಳಿಕ ಒಂದು ವರ್ಷ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಯೋಗೀಶ್ ಆಚಾರ್ಯ ಮೇ 23ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದನು.
ಆತನನ್ನು ಪ್ರಕರಣದ ಪ್ರಸ್ತುತ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿ ಯೋಗೀಶ್ ಆಚಾರ್ಯ ಪಾಂಗಾಳ ಶರತ್ ಶೆಟ್ಟಿ ಹತ್ಯೆಗೆ ಕಾರಣವಾದ ಅಂಶಗಳು, ಹತ್ಯೆಯ ಬಳಿಕ ತನಗೆ ತಲೆ ಮರೆಸಿಕೊಳ್ಳಲು ಸಹಕರಿಸಿದ ದುಬಾೖಯಲ್ಲಿರುವ ರಾಜೇಶ್ ಆಚಾರ್ಯ ಎಂಬಾತನ ಬಗ್ಗೆ ಬಾಯ್ಬಿಟ್ಟಿದ್ದನು.
ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಎಸ್ಪಿ ಡಾ| ಕೆ. ಅರುಣ್ ಅವರು, ಯೋಗೀಶ್ ಆಚಾರ್ಯ ಬಾಯ್ಬಿಟ್ಟಿರುವ ವಿಚಾರಗಳು, ಆರೋಪಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಿಳಿಸಿದಂತೆ ರಾಜೇಶ್ ಆಚಾರ್ಯ ಮತ್ತು ಕಲಿ ಯೋಗೀಶ್ ಬಂಧನ ಬಾಕಿಯಿದೆ ಎಂದು ತಿಳಿಸಿದ್ದಾರೆ.