Home ಕರಾವಳಿ ವಿಟ್ಲ: 18 ದಿನಗಳ ಹಿಂದೆ ಮೃತಪಟ್ಟ ದಫನಗೊಂಡ ವ್ಯಕ್ತಿಯ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ

ವಿಟ್ಲ: 18 ದಿನಗಳ ಹಿಂದೆ ಮೃತಪಟ್ಟ ದಫನಗೊಂಡ ವ್ಯಕ್ತಿಯ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ

0

ವಿಟ್ಲ : 18 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಸಾವಿನ ಕುರಿತು ಸಹೋದರ ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ದಫನ ಮಾಡಿರುವ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಮಂಜೇಶ್ವರ ಹಾಗೂ ವಿಟ್ಲ ಠಾಣಾ ಪೊಲೀಸರು ಮುಂದಾಗಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್(44) ಮೃತಪಟ್ಟ ವ್ಯಕ್ತಿ. ಅಶ್ರಫ್ ಅವರದ್ದು ಸಹಜ ಸಾವಲ್ಲ, ಕೊಲೆಯ ಶಂಕೆಯಿರುವುದಾಗಿ ಸಂಶಯ ವ್ಯಕ್ತಪಡಿಸಿ ಮೃತರ ಸಹೋದರ ಇಬ್ರಾಹೀಂ ಮಂಜೇಶ್ವರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಫನಗೊಂಡ ಮೃತದೇಹವನ್ನು ಮೇಲಕ್ಕೆತ್ತಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಆದೇಶ ಪಡೆದು ಮಂಜೇಶ್ವರ ಪೊಲೀಸರು, ವಿಟ್ಲ ಠಾಣಾ ಪೊಲೀಸರ ಸಹಕಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಗುರುವಾರ ಬೆಳಗ್ಗೆ ಅಶ್ರಫ್ ರನ್ನು ದಫನ ಮಾಡಿರುವ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಗೆ ಆಗಮಿಸಿದ್ದಾರೆ. ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿ, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವಿನಲ್ಲಿ ಅಶ್ರಫ್ ರ ಮೃತದೇಹವನ್ನು ದಫನ ಮಾಡಿದಲ್ಲಿಂದ ಮೇಲೆತ್ತುವ ಕಾರ್ಯ ಆರಂಭಿಸಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಸ್ಥಳದಲ್ಲಿ ಉಪಸ್ಥಿತರಿದ್ದಾರೆ. ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ ತಮ್ಮ ವಾಸದ ಮನೆ ಸಮೀಪ ಗೂಡಂಗಡಿ ನಡೆಸುತ್ತಿದ್ದರು. ಮೇ 5ರಂದು ರಾತ್ರಿ ಗೂಡಂಗಡಿ ಮುಚ್ಚಿ ಮನೆಯಲ್ಲಿ ಆಹಾರ ಸೇವಿಸಿ ನಿದ್ರಿಸಿದ್ದ ಅಶ್ರಫ್‌ ಮರುದಿನ ಬೆಳಗ್ಗೆ ಮೃತಪಟ್ಟಿದ್ದರು. ಮಲಗಿದಲ್ಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ಇತರರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಬಳಿಕ ಅಂದು ಸಂಜೆ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಯ ದಫನಭೂಮಿಯಲ್ಲಿ ಅಶ್ರಫ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಅಶ್ರಫ್‌ ಮೃತಪಟ್ಟ ಸಂದರ್ಭ ಅವರ ಸಹೋದರ ಇಬ್ರಾಹೀಂ ಪುಣೆಯಲ್ಲಿದ್ದರೆನ್ನಲಾಗಿದೆ. ಇದೀಗ ಅವರು ಊರಿಗೆ ಆಗಮಿಸಿ ತನ್ನ ಅಣ್ಣ ಅಶ್ರಫ್ ಸಾವಿನಲ್ಲಿ ನಿಗೂಢತೆ ಇರುವುದಾಗಿ ಸಂಶಯಿಸಿ ಪೊಲೀಸ್‌ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.


LEAVE A REPLY

Please enter your comment!
Please enter your name here