ಕಾರ್ಕಳ: ಕಲ್ಲು ಸಾಗಾಟದ ಲಾರಿ ಪಲ್ಟಿ- ಕಲ್ಲಿನಡಿ ಸಿಲುಕಿ ಇಬ್ಬರು ಕಾರ್ಮಿಕರು ದಾರುಣ ಸಾವು..!
ಕಾರ್ಕಳ: ಸೈಜ್ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ಬಳಿ ಶನಿವಾರ ಸಂಜೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಕೋರೆ ಕಾರ್ಮಿಕರಾದ ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿಗಳಾದ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃತಪಟ್ಟಿದ್ದಾರೆ.ಕಾರ್ಕಳ ಪುರಸಭೆಯ ಮಾಜಿ ಸದಸ್ಯರೊಬ್ಬರ ಮಾಲೀಕತ್ವದ ನಿಟ್ಟೆಯ ಭ್ರಾಮರಿ ಕ್ರಾಸ್ ಬಳಿಯ ಕಲ್ಲು ಕೋರೆಯಲ್ಲಿ ಶಿಲೆ ಕಲ್ಲು ಲೋಡ್ ಮಾಡಿಕೊಂಡು ಮಂಗಳೂರಿನ ಕಡೆ ತೆರಳುತ್ತಿದ್ದಾಗ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಭೀಕರ ಸಂಭವಿಸಿದೆ. ಅಪಘಾತದ ಸಂದರ್ಭದಲ್ಲಿ ಕಾರ್ಮಿಕರು ಹಿಂಬದಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ, ಲಾರಿ ಪಟ್ಟಿಯಾಗುತ್ತಿದ್ದಂತೆಯೇ ಕಲ್ಲುಗಳು ಕಾರ್ಮಿಕರಾದ ಕರಿಯಪ್ಪ ಮತ್ತು ನರಿಯಪ್ಪ ಎಂಬವರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಲ್ಲುಕೋರೆ ಕಾರ್ಮಿಕರ ಜೀವಕ್ಕಿಲ್ಲ ಬೆಲೆ:ಕಾರ್ಕಳ ಪರಿಸರದಲ್ಲಿ ಸುಮಾರು100 ಕ್ಕೂ ಅಧಿಕ ಕಲ್ಲು ಕೋರೆಗಳು ಕಾರ್ಯಾಚರಿಸುತ್ತಿದ್ದು ಈ ಪೈಕಿ ರಾಜಕೀಯ ಪುಡಾರಿಗಳು ಪಕ್ಷಬೇಧವಿಲ್ಲದೇ ಸಾಕಷ್ಟು ಅನಧಿಕೃತ ಕೋರೆಗಳನ್ನು ನಡೆಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಕ್ರಶರ್ ಹಾಗೂ ಕಲ್ಲು ಗಣಿಗಾರಿಕೆ ಸಂದರ್ಭದಲ್ಲಿ ಹತ್ತಾರು ದುರ್ಘಟನೆಗಳು ಸಂಭವಿಸಿ ಹೊಟ್ಟೆಪಾಡಿಗಾಗಿ ಬರುವ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಬಹುತೇಕ ಗಣಿ ಮಾಲಕರು ಕಾರ್ಮಿಕರ ಸುರಕ್ಷತೆಗೆ ಗಮನ ನೀಡದ ಹಿನ್ನೆಲೆಯಲ್ಲಿ ಇಂತಹ ದುರಂತಗಳು ಮರುಕಳಿಸುತ್ತಿವೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆಯವರು ಎಚ್ಚೆತ್ತು ತಪ್ಪಿತಸ್ಥ ಗಣಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಲ್ಲಿ ಇಂತಹ ದುರಂತಗಳಿಗೆ ಬ್ರೇಕ್ ಬೀಳಲಿದೆ.ಅಮಾಯಕ ಕಾರ್ಮಿಕರಿಬ್ಬರು ಬಲಿಯಾಗಿರುವ ಕುರಿತು ಸಾರ್ವಜನಿಕರು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಕಳ ಗ್ರಾಮಾಂತರ
ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.