Home ಕರಾವಳಿ ದೆಹಲಿ ಅಬಕಾರಿ ನೀತಿ ಹಗರಣ: ಇಡೀ AAP ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ED-  ರಾಜಕೀಯ...

ದೆಹಲಿ ಅಬಕಾರಿ ನೀತಿ ಹಗರಣ: ಇಡೀ AAP ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ED-  ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿಸಿದ ದೇಶದ ಮೊದಲ ಕೇಸ್‌

0

ನವದೆಹಲಿ: ರಾಜಕೀಯ ಪಕ್ಷವೊಂದನ್ನು ಆರೋಪಿ ಎಂದು ಹೆಸರಿಸಿರುವುದು ದೇಶದಲ್ಲಿ ಇದೇ ಮೊದಲು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಆಮ್‌ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ.


ದೆಹಲಿಯ ವಿಶೇಷ ಕೋರ್ಟ್‌ಗೆ ಜಾರಿ ನಿರ್ದೇಶನಾಲಯವು ಪೂರಕ ದಾಖಲೆಗಳೊಂದಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದು ಈ ಪ್ರಕರಣದ 8ನೇ ಚಾರ್ಜ್‌ಶೀಟ್‌ ಆಗಿದೆ. ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ. ಎಎಪಿ ನಾಯಕರು, ಇತರ ವ್ಯಕ್ತಿಗಳೊಂದಿಗೆ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಇಡಿ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವು ನಾಯಕರು ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದು, ಲಾಭದ ಸ್ವಲ್ಪ ಮೊತ್ತವನ್ನು ಎಎಪಿಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೂ ಬಳಸಲಾಗಿದೆ. ಅಲ್ಲದೇ ಈ ಪ್ರಕರಣದ ಮಾತುಕತೆ ನಡೆಸಲು ಕೇಜ್ರಿವಾಲ್ ಅವರು ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂಬುದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ. ಅವರು ತಂಗಿದ್ದ ಹೋಟೆಲ್‌ ಬಿಲ್‌ ಅನ್ನು ಪ್ರಕರಣದ ಆರೋಪಿಯೊಬ್ಬರು ಭಾಗಶಃ ಪಾವತಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿವೆ ಎಂಬ ಮಾಹಿತಿಯನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ. ನ್ಯಾ. ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದ್ದರೂ, ಕಕ್ಷಿದಾರರ ವಾದಗಳಿಗೆ ಯಾವುದೇ ಧಕ್ಕೆಯಾಗದಂತೆ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.

ಕಳೆದ ಮಾರ್ಚ್ 21ರಂದು ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಜೂ.1 ರ ವರೆಗೆ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಮೇ 25 ರಂದು ದೆಹಲಿಯ 7 ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇಂಡಿಯಾ ಬ್ಲಾಕ್‌ ಪರ ಕೇಜ್ರಿವಾಲ್‌ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here