ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆ ಗುಡುಗಿನ ಆರ್ಭಟ, ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ರವಿವಾರ ಸಂಜೆ ಜಿಲ್ಲೆಯ ಹಲವಡೆ ಮಳೆಯಾಗಿದೆ.



ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದ ಹಲವಡೆ ಮಳೆಯಾಗಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಹಾನಿಯುಂಟಾಗಿದೆ. ಇದೇ ವೇಳೆ ಮಂಗಳೂರು ನಗರದಲ್ಲಿ ತುಂತುರು ಮಳೆ ಕಾಣಿಸಿಕೊಂಡಿತ್ತು.


ಜಿಲ್ಲೆಯಲ್ಲಿ ಶನಿವಾರ ಮತ್ತು ರವಿವಾರ ಸಂಜೆ ಗಾಳಿ ಮಳೆಗೆ ಅಲ್ಲಲ್ಲಿ ಮರ ಬಿದ್ದು ಕೆಲವು ಮನೆಗಳು ಹಾನಿಯಾಗಿದೆ. ಜಿಲ್ಲೆಯಲ್ಲಿ 7 ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಸುಳ್ಯದಲ್ಲಿ 4, ಕಡಬದಲ್ಲಿ 1 ಮತ್ತು ಬಂಟ್ವಾಳದಲ್ಲಿ 2 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲಲ್ಲಿ ವಿದ್ಯತ್ ಸಂಪರ್ಕ ಕಡಿದು ಹೋಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರಿನ ಉರ್ಲಾಂಡಿ, ಸಿಂಗಾಣಿಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ. ಬಪ್ಪಳಿಗೆ ಎಂಬಲ್ಲಿ ಕಮಲ ಎಂಬವರ ಮನೆಯ ಶೀಟು ಗಾಳಿಗೆ ಹಾರಿ ಹೋಗಿದೆ. ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಸುಬ್ರಹ್ಮಣ್ಯ, ಕೊಕ್ಕಡ, ನೆಲ್ಯಾಡಿಯಲ್ಲಿ ಗಾಳಿ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಹವಾಮಾನ ಇಲಾಖೆ ಶುಕ್ರವಾರದಿಂದ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಇದರಿಂದ ಇನ್ನೂ ಕೆಲವು ದಿನಗಳ ಕಾಲ ಮಳೆಯ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ.
ದ.ಕ ಜಿಲ್ಲೆಯಲ್ಲಿ ರವಿವಾರ ಸರಾಸರಿ 33.7 ಡಿಗ್ರಿ ಗರಿಷ್ಟ, 26.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಸಂಜೆ 24.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿದೆ. ರಾತ್ರಿ ತಂಪಾದ ವಾತಾವರಣ ಇತ್ತು. ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸರಾಸರಿ 34.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾತ್ರಿ ಮಳೆ ಕಾಡು ಹಾಗು ಪಶ್ಚಿಮಘಟ್ಟದ ಹಲವಡೆ ಸಾಧಾರಣ ಮಳೆ ಸಹಿತ ಹೆಚ್ಚಿನ ಪ್ರಮಾಣದ ಮೋಡಕವಿದ ವಾತಾವರಣ ಕಂಡುಬಂದಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.