Home ಕರಾವಳಿ ಮಂಗಳೂರು: ಧಾರಾವಾಹಿಯ ದೃಶ್ಯವೊಂದರಲ್ಲಿ ನಟಿಯೊಬ್ಬರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚಾರ : ಪೊಲೀಸರಿಂದ ದಂಡ

ಮಂಗಳೂರು: ಧಾರಾವಾಹಿಯ ದೃಶ್ಯವೊಂದರಲ್ಲಿ ನಟಿಯೊಬ್ಬರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚಾರ : ಪೊಲೀಸರಿಂದ ದಂಡ

0
ಮಂಗಳೂರು: ನಗರದಲ್ಲಿ ಧಾರಾವಾಹಿಯ ದೃಶ್ಯವೊಂದರಲ್ಲಿ ನಟಿಯೊಬ್ಬರು ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದಕ್ಕಾಗಿ ಪೊಲೀಸರು “ದಂಡ’ ವಿಧಿಸಿದ ಘಟನೆ ನಡೆದಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಸೀತಾರಾಮ’ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ ಸ್ಕೂಟರ್‌ನಲ್ಲಿ ಇಬ್ಬರು ಸಂಚರಿಸುವ ದೃಶ್ಯವಿತ್ತು. ಅದರಲ್ಲಿ ಸವಾರೆ ಹೆಲ್ಮೆಟ್‌ ಧರಿಸಿದ್ದರೆ ಹಿಂಬದಿ ಕುಳಿತಾಕೆ ಹೆಲ್ಮೆಟ್‌ ಧರಿಸಿರಲಿಲ್ಲ.

ಟಿವಿಯಲ್ಲಿ ಪ್ರಸಾರವಾದ ಈ ದೃಶ್ಯವನ್ನು ಮಂಗಳೂರಿನಲ್ಲಿ ವೀಕ್ಷಿಸಿದ ಜಯಪ್ರಕಾಶ್‌ ಎಕ್ಕೂರು ಎಂಬವರು, ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿ, ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಆ ನಟಿ, ಧಾರಾವಾಹಿಯ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದರು.

ಪೊಲೀಸ್‌ ಆಯುಕ್ತರು ಮಂಗಳೂರು ಸಂಚಾರ ಪೂರ್ವ ಠಾಣೆಗೆ ಪ್ರಕರಣವನ್ನು ವಹಿಸಿದ್ದರು. ಅದರಂತೆ ಜಯಪ್ರಕಾಶ್‌ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಿಸಿದ್ದು, ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್‌ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ರಾಜಾಜಿನಗರ ಠಾಣಾ ಪೊಲೀಸರು ಸಂಬಂಧಪಟ್ಟ ನಟಿಗೆ ಮತ್ತು ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಇನ್ನು ಮುಂದೆ ತಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಧಾರಾವಾಹಿಯ ಪ್ರೊಡಕ್ಷನ್‌ ಮ್ಯಾನೇಜರ್‌ ರಿಂದ ಹಿಂಬರಹ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಧಾರಾವಾಹಿಯಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚರಿಸುವ ದೃಶ್ಯವನ್ನು ನೋಡಿದೆ. ಇದರ ಪರಿಣಾಮದ ಕುರಿತು ಆಯುಕ್ತರಿಗೆ ದೂರು ನೀಡಿದೆ. ಪೊಲೀಸರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತದೆ ಅಂದುಕೊಂಡಿರಲಿಲ್ಲ. ಪೊಲೀಸರು ದಂಡ ವಿಧಿಸಿರುವುದು ಇತರರಿಗೂ ಪಾಠವಾಗಿದೆ, ಮಾತ್ರವಲ್ಲದೆ ಇದರಿಂದ ಜಾಗೃತಿಯೂ ಮೂಡಲಿದೆ ಎಂದು ಜಯಪ್ರಕಾಶ್‌ ಎಕ್ಕೂರು ಹೇಳಿದ್ದಾರೆ.

LEAVE A REPLY

Please enter your comment!
Please enter your name here