ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಓರ್ವ ಮಹಿಳೆ ಹಾಗೂ ಇನ್ನೋರ್ವ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಿ ಸಿ ರೋಡಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮೊಹಮ್ಮದ್ ಸಿ ಎ (61), ಉಬೈದಾ ಮಂಝಿಲ್ ನಿವಾಸಿ ಕಮರುನ್ನೀಸಾ (41) ಹಾಗೂ ಪರಾರಿಯಾದವನನ್ನು ಶರೀಫ್ ಎಂದು ಹೆಸರಿಸಲಾಗಿದೆ. ಶುಕ್ರವಾರ ರಾತ್ರಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆ ಎಲ್ 14 ಟಿ777 ನೋಂದಣಿ ಸಂಖ್ಯೆಯ ಕಾರನ್ನು ಬಂಟ್ವಾಳ ನಗರ ಠಾಣಾ ಪಿಎಸ್ಸೆ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಪರಿಶೀಲಿಸಲು ತೆರಳಿದಾಗ ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾರಿನಲ್ಲಿ ಮಹಿಳೆಯು ಪತ್ತೆಯಾಗಿರುತ್ತಾಳೆ. ಪರಾರಿಯಾಗುತ್ತಿದ್ದವರ ಪೈಕಿ ಮೊಹಮ್ಮದ್ ಸಿ ಎ ಹಾಗೂ ಕಮರುನ್ನಿಸಾ ಎಂಬವರನ್ನು ಪೊಲೀಸರು ಹಿಡಿದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ಬಳಿಯಲ್ಲಿದ್ದ 500 ರ ಮುಖ ಬೆಲೆಯ 46 ಖೋಟಾ ನೋಟುಗಳು, 5,300/- ರೂಪಾಯಿ ನಗದು ಹಣ, 3 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 84/2024, ಕಲಂ: 489(B), 489(C) ಜೊತೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.