Home ಕರಾವಳಿ ಸೈಬರ್ ವಂಚನೆ: 1.60 ಕೋಟಿ ರೂ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಸೈಬರ್ ವಂಚನೆ: 1.60 ಕೋಟಿ ರೂ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

0

ಮಂಗಳೂರು: ಅಂತರಾಷ್ಟ್ರೀಯ ಕೊರಿಯರ್ ಕಂಪೆನಿ ಫೆಡೆಕ್ಸ್ ಹೆಸರಿನಲ್ಲಿ ದೊಡ್ಡ ವಂಚನೆ ಪ್ರಕರಣದ ಜಾಲ ನಡೆಯುತ್ತಿದ್ದು, ಈಗಾಗಲೇ ಹಲವಾರು ಜನ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಅದೇ ರೀತಿ ಮಂಗಳೂರಿನಲ್ಲಿ ಒಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರಿಂದ ಸಿಬಿಐನ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ‘ನಿಮ್ಮ ಹೆಸರಲ್ಲಿ ಥಾಯ್ಲೆಂಡಿಗೆ ಕಳುಹಿಸಲಾದ ಪಾರ್ಸೆಲ್ ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಎಂದು ಹೇಳಿ ಬೆದರಿಸಿ ₹ 1.60 ಕೋಟಿ ಹಣ ವನ್ನು ಪಡೆದು ಘಟನೆ ನಡೆದಿದು, ಸೈಬರ್ ಕ್ರೈಂ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ 72 ವರ್ಷದ ನಿವೃತ್ತ ಎಂಜಿನಿಯರ್‌ಗೆ ಒಬ್ಬರಿಗೆ ಫೆಡೆಕ್ಸ್ ಕಂಪೆನಿಯಿಂದ ಕಾಲ್ ಬಂದಿದ್ದು, ಅದರಲ್ಲಿ ಮುಂಬೈ ನಿಂದ ಥಾಯ್ಲೆಂಡ್ ಗೆ ನೀವು ಪಾರ್ಸೆಲ್ ಕಳುಹಿಸಿದ್ದು ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್‌ಪೋರ್ಟ್‌ಗಳು ಮೂರು ಕ್ರೆಡಿಟ್ ಕಾರ್ಡ್‌ಗಳು, 140 ಗ್ರಾಂ ಎಂಡಿಎಂಎ, 4 ಕೆ.ಜಿ. ಬಟ್ಟೆ ಹಾಗೂ ಒಂದು ಲ್ಯಾಪ್‌ಟಾಪ್‌ ಇತ್ತು. ಈ ಬಗ್ಗೆ ಮುಂಬೈ ಅಪರಾಧ ವಿಭಾಗದವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.  ನಂತರ, ಇನ್ನೊಬ್ಬ ವ್ಯಕ್ತಿ ಕರೆ ಮಾಡಿದ್ದು, ತನ್ನನ್ನು ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಸಿಬಿಐ ಅಧಿಕಾರಿ ರುದ್ರ ರಾಥೋಡ್ ನಿಮಗೆ ಹೆಚ್ಚುವರಿ ಮಾಹಿತಿ ನೀಡುತ್ತಾರೆ. ಅವರನ್ನು ಇ–ಮೇಲ್ ಮೂಲಕ ಸಂಪರ್ಕಿಸುವಂತೆ ಹೇಳಿ ಇಮೇಲ್‌ ವಿಳಾಸವನ್ನು ನೀಡಿದ್ದ. ಅದೇ ದಿನ ಮತ್ತೊಬ್ಬ ವ್ಯಕ್ತಿ ನಿವೃತ್ತ ಎಂಜಿನಿಯರ್‌ಗೆ ಕರೆ ಮಾಡಿ, ತನ್ನನ್ನು ರುದ್ರ ರಾಥೋಡ್ ಎಂದು ಪರಿಚಯಿಸಿಕೊಂಡಿದ್ದ. ಈ ಪ್ರಕರಣದಲ್ಲಿ ಹಲವಾರು ಮಕ್ಕಳನ್ನು ಕೊಲೆಗೈದ ತಂಡವು ಶಾಮೀಲಾಗಿದೆ. ನೀವು ತನಿಖೆಗೆ ನಮಗೆ ಸಹಕರಿಸದೇ ಹೋದರೆ ಇಂಟರ್‌ಪೋಲ್‌ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ.

ಸ್ಕೈಪ್‌ ಆ್ಯಪ್‌ನಲ್ಲಿ ಖಾತೆಯನ್ನು ತೆರೆಯುವಂತೆ ಕರೆ ಮಾಡಿದ ತಂಡವು ಹೇಳಿತ್ತು. ನಂತರ ವಿಡಿಯೊ ಕರೆ ಮಾಡಿಯೂ ಬೆದರಿಸಿದ್ದರು. ಸ್ಕೈಪ್‌ ಆ್ಯಪ್‌ನಲ್ಲಿ ಸಿಬಿಐ ಹೆಸರಿನಲ್ಲಿ ಹಲವಾರು ನೋಟಿಸ್‌ಗಳನ್ನು ತಂಡವು ಕಳುಹಿಸಿತ್ತು. ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್ ರೂಪದಲ್ಲಿ ಹಣ ಕಟ್ಟಬೇಕು ಎಂದು ಹೇಳಿತ್ತು. ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲದಿದ್ದರೆ ಹಣವನ್ನು ಮರಳಿಸಲಾಗುತ್ತದೆ ಎಂದೂ ನಂಬಿಸಿದ್ದರು. ಇದನ್ನು ನಂಬಿದ್ದ ನಿವೃತ್ತ ಎಂಜಿನಿಯರ್‌ ತಮ್ಮ ಬ್ಯಾಂಕ್ ಖಾತೆಯಿಂದ ಮೇ 2ರಂದು ₹ 1.10 ಕೋಟಿ ಪಾವತಿಸಿದ್ದರು. ನಂತರ ಮೇ 6ರಂದು ಕ್ರೈಂ ಬ್ರಾಂಚ್ ಕಡೆಯಿಂದ ಅವರಿಗೆ ಮತ್ತೆ ಕರೆ ಬಂದಿತ್ತು. ಆಗ ಮತ್ತೆ ₹ 50 ಲಕ್ಷವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು. ಮರುದಿನ ಕರೆ ಮಾಡಿದಾಗ, ಅಪರಿಚಿತರ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಆಗ ಸಂಶಯದಿಂದ ಮಗಳಿಗೆ ಈ ವಿಷಯ ತಿಳಿಸಿದ್ದರು. ಮೋಸ ಹೋಗಿರುವುದನ್ನು ತಿಳಿದು ಸೆನ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here