ಮಂಗಳೂರು: ಸೈಬರ್ ವಂಚಕರ ಜಾಲಕ್ಕೆ ಮಂಗಳೂರಿನ 72 ವರ್ಷದ ಹಿರಿಯ ವ್ಯಕ್ತಿಯೊಬ್ಬರು 1.60ಕೋಟಿ ರೂ. ಕಳೆದುಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಥಾಯ್ಲೆಂಡಿಗೆ ಕಳುಹಿಸಲಾಗಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಫೋನ್ ಮಾಡಿ ಬೆದರಿಸಿದ್ದಲ್ಲದೆ, ಕೋಟಿ ಮೊತ್ತದ ಹಣ ವಂಚನೆಗೈದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಅಪರಿಚಿತನೊಬ್ಬ ಇವರಿಗೆ ಕರೆ ಮಾಡಿ, ತನ್ನ ಹೆಸರನ್ನು ರಾಜೇಶ್ ಕುಮಾರ್ ಎಂದು ಪರಿಚಯಿಸಿ ಫೆಡೆಕ್ಸ್ ಕಂಪೆನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.



ತಾವು ಮುಂಬೈನಿಂದ ಥಾಯ್ಲೆಂಡ್ ದೇಶಕ್ಕೆ ಕಳುಹಿಸಿರುವ ಪಾರ್ಸೆಲ್ ಅನ್ನು ಅಲ್ಲಿನ ಕಸ್ಟಮ್ಸ್ ನವರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪಾರ್ಸೆಲ್‌ನಲ್ಲಿ ಕೆಲವು ಅಕ್ರಮ, ನಿಷಿದ್ಧ ವಸ್ತುಗಳು ಇರುವುದಾಗಿ ಹೇಳಿದ್ದು, ಈ ಬಗ್ಗೆ ಮುಂಬೈ ಕ್ರೈಮ್ ಬ್ರಾಂಚ್ ನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾನೆ. ಈ ಬಗ್ಗೆ ನಿಮಗೆ ಹೆಚ್ಚುವರಿ ಮಾಹಿತಿಯನ್ನು ಸಿಬಿಐ ಅಧಿಕಾರಿ ರುದ್ರ ರಾಥೋಡ್ ನೀಡುತ್ತಾರೆ ಎಂದಿದ್ದಾನೆ. ಅದೇ ದಿನ ರುದ್ರ ರಾಥೋಡ್ ಎಂದು ತನ್ನನ್ನು ಪರಿಚಯಿಸಿದ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಪ್ರಕರಣದಲ್ಲಿ ನೀವು ನಮಗೆ ಸಹಕರಿಸದೆ ಇದ್ದಲ್ಲಿ ವಿದೇಶದಲ್ಲಿರುವ ಇಂಟರ್ಪೊಲ್ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತದೆ ಎಂದು ಭಯ ಹುಟ್ಟಿಸಿದ್ದಾನೆ. ಬಳಿಕ ವ್ಯಕ್ತಿಗೆ ಭಯ ಹುಟ್ಟಿಸಿ, Skype ಆ್ಯಪ್ ಮೂಲಕ ಖಾತೆ ತೆರೆಯುವಂತೆ ಒತ್ತಾಯಪಡಿಸಿ ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್ ರೂಪದಲ್ಲಿ ಹಣವನ್ನು ಪಾವತಿ ಮಾಡಲೇಬೇಕು ಎಂದು ಒತ್ತಾಯಿಸಿದ್ದಾನೆ. ಆದ್ದರಿಂದ ತನ್ನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಮೇ 2ರಂದು 1.10 ಕೋಟಿ ರೂಪಾಯಿ ಪಾವತಿಸಿದ್ದಾರೆ. ಬಳಿಕ, ಮೇ 6ರಂದು ಕ್ರೈಂ ಬ್ರಾಂಚ್ ಕಡೆಯಿಂದ ಫೋನ್ ಮಾಡಿದ್ದಕ್ಕಾಗಿ ಮತ್ತೆ 50 ಲಕ್ಷ ರೂಪಾಯಿ ಮೊತ್ತವನ್ನು ಅವರು ಹೇಳಿದ ಖಾತೆಗೆ ಪಾವತಿ ಮಾಡಿದ್ದಾರೆ. ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

