ಮಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾದಿರಿಸದ ಟಿಕೆಟ್ ಗಳನ್ನು ನೀಡಲು ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ (ಎ ಟಿ ವಿ ಎಂ) ಅಳವಡಿಸಲಾಗಿದೆ. ಎ ಟಿ ವಿ ಎಂ ನಲ್ಲಿ ಈ ಹಿಂದೆ ಸಹಾಯಕರನ್ನು ನಿಯೋಜಿಸಿ ಟಿಕೆಟ್ ಗಳನ್ನು ವಿತರಿಸಲಾಗು ತ್ತಿದ್ದರೂ ಕೋವಿಡ್ ಅವಧಿಯಲ್ಲಿ ಈ ಸೇವೆ ರದ್ದುಗೊಂಡಿತ್ತು. ಪ್ರಯಾಣಿಕರಿಗೆ ನೇರವಾಗಿ ಇದರ ಬಳಕೆ ಕಷ್ಟವಾಗಿರುವುದರಿಂದ ಬಹುತೇಕ ಮಂದಿ ಕೌಂಟರ್ ಗಳಿಂದ ಟಿಕೇಟು ಪಡೆದು ಪ್ರಯಾಣಿಸುತ್ತಿದ್ದಾರೆ. ಇದೀಗ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ಈ ಯಂತ್ರದ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಸಹಾಯಕರನ್ನು ನಿಯೋಜಿಸಿ ಟಿಕೆಟ್ ವಿತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಅದರಂತೆ ಮೊದಲ ಹಂತದಲ್ಲಿ ಎಟಿವಿಎಂ ಇರುವ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಕಾಸರಗೋಡು ಸಹಿತ ವಿಭಾಗ ವ್ಯಾಪ್ತಿಗೆ 300 ಸಹಾಯಕರನ್ನು ನಿಯೋಜಿಸಲು ಮುಂದಾಗಿದೆ. ಪ್ರಸ್ತುತ ಇಲಾಖಾ ಸಿಬಂದಿಯೇ ಪ್ರಯಾಣಿಕರಿಗೆ ಟಿಕೆಟ್ ಪಡೆಯಲು ನೆರವಾಗುತ್ತಿದ್ದಾರೆ. ಇದು ಅವರ ಕೆಲಸದ ಒತ್ತಡ ವನ್ನು ಹೆಚ್ಚಿಸಿದ್ದು ಸಹಾಯಕರ ನಿಯೋಜನೆಯಾಗುತ್ತಿದೆ. ಪ್ರತಿದಿನ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ 8 ಲಕ್ಷ ರೂ. ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಕಾದಿರಿಸದ ಟಿಕೆಟ್ ವಿತರಣೆ ಆಗುತ್ತಿದೆ. ಇನ್ನು ಮುಂದೆ ಇದನ್ನು ಸಂಪೂರ್ಣವಾಗಿ ಎಟಿವಿಎಂ . ಮೂಲಕವೇ ವಿತರಿಸುವುದು ಇಲಾಖೆಯ ಗುರಿ. ಮಂಗಳೂರು ಸೆಂಟ್ರಲ್‌ಗೆ 21 ಮತ್ತು ಜಂಕ್ಷನ್ ಗೆ 9 ಸಿಬಂದಿ ನಿಯೋಜಿಸಲು ಉದ್ದೇಶಿಸಲಾಗಿದ್ದು, ದಿನದ 24 ಗಂಟೆಯೂ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ. ಒಂದು ವರ್ಷದ ಒಪ್ಪಂದದ ಆಧಾರದಲ್ಲಿ ಸಹಾಯಕರ ನೇಮಕಾತಿ ನಡೆಯಲಿದ್ದು, ಇವರು ರೈಲ್ವೇ ಇಲಾಖೆಯ ನೌಕರರಲ್ಲ. ಟಿಕೆಟ್ ಮಾರಾಟದ ಮೇಲಿನ ಕಮಿಷನ್ ಆಧಾರದಲ್ಲಿ ಈ ಸಹಾಯಕರು ಆದಾಯ ಪಡೆಯಲಿದ್ದಾರೆ. ಇದಕ್ಕಾಗಿ ರೈಲ್ವೇ ಅರ್ಜಿ ಆಹ್ವಾನಿಸಿದ್ದು,www. sr.indianrailways.gov.in ಅರ್ಜಿ ನಮೂನೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಎಸ್ ಎಸ್ ಎಲ್ ಸಿ ಉತ್ತೀರ್ಣರಾದವರು ಸಲ್ಲಿಸಬಹುದಾಗಿದ್ದು ಮೇ 24 ಕೊನೇ ದಿನಾಂಕ ಎಂದು ರೈಲ್ವೇ ಇಲಾಖೆ ತಿಳಿಸಿದೆ.