Home ಕರಾವಳಿ ಪುತ್ತೂರು: ಕರ್ತವ್ಯಕ್ಕೆ ಹಾಜರಾದ ಬೆನ್ನಲ್ಲೇ ಮತ್ತೆ ಅಮಾನತು

ಪುತ್ತೂರು: ಕರ್ತವ್ಯಕ್ಕೆ ಹಾಜರಾದ ಬೆನ್ನಲ್ಲೇ ಮತ್ತೆ ಅಮಾನತು

0

ಪುತ್ತೂರು : ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಸೇರಿದ ದಿನವೇ ಮತ್ತೆ ಅಮಾನಾತಾದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಪುತ್ತೂರಿನ ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಂ.ಗಂಗಾಧರ ಸ್ವಾಮಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದು ಗುರುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ರಾಮಚಂದ್ರ ಅವರಿಗೆ ಮಧ್ಯಾಹ್ನ ವೇಳೆ ಅಮಾನತು ಆದೇಶ ನೀಡಲಾಗಿದೆ.


ರಾಮಚಂದ್ರ ಅವರು ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರವಾನಗಿ ನೀಡದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗಿದೆ’ ಎಂದು ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಜನವರಿ 4ರಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

ಈ ದೂರಿನ ತನಿಖೆಗಾಗಿ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಈ ಮಧ್ಯೆ ರಾಮಚಂದ್ರ ಅವರನ್ನು ಜ.16ರಿಂದ 2 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಆದೇಶ ಮಾಡಿದ್ದರು. ಈ ನಡುವೆ ಅವರನ್ನು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿ ಇದ್ದ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ವರ್ಗಾಯಿಸಿ ಕೃಷಿ ಮಾರಾಟ ಇಲಾಖೆ ಆದೇಶ ಮಾಡಿತ್ತು. ಆದರೆ, ರಾಮಚಂದ್ರ ಅವರು ರಾಯಚೂರಿನಲ್ಲಿ ಕರ್ತವ್ಯಗೆ ಹಾಜರಾಗದೆ ವರ್ಗಾವಣೆ ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಕ್ಕೆ (ಕೆಎಟಿಗೆ) ದೂರು ಸಲ್ಲಿಸಿದ್ದರು. ಕೆಎಟಿ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಗುರುವಾರ ಬೆಳಿಗ್ಗೆ ಅವರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಕರ್ತವ್ಯಕ್ಕೆ ಹಾಜರಾಗಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಅಮಾನತು ಆದೇಶ ಬಂದಿದೆ.

LEAVE A REPLY

Please enter your comment!
Please enter your name here