Home ಕರಾವಳಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ‌ ಸಾಮೂಹಿಕ ವಿವಾಹ- 123 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ‌ ಸಾಮೂಹಿಕ ವಿವಾಹ- 123 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

0

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಜರುಗಿದ 52ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಒಟ್ಟು 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಶ್ರೀ ಧರ್ಮಸ್ಥಳ ದೇವಸ್ಥಾನದ ಮುಂಭಾಗದಿಂದ ಅಮೃತವರ್ಷಿಣಿ ಸಭಾಭವನದವರೆಗೆ ಸಾಮೂಹಿಕ ವಿವಾಹದ ಮೆರವಣಿಗೆ ನಡೆಯಿತು. ಬ್ಯಾಂಡ್, ವಾಲಗ, ನಂದಿ, ಆನೆಗಳು, ಹಕ್ಕಿ ನಿಶಾನೆ, ತಟ್ಟಿರಾಯ ಮೊದಲಾದ ವಿಶೇಷ ಆಕರ್ಷಣೆಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ವಧೂ – ವರರು ಭಾಗವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಚಿತ್ರನಟ ದೊಡ್ಡಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಈ ಹಿಂದೆ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಮಕ್ಕಳು, ಮೊಮ್ಮಕ್ಕಳು ಈ ಬಾರಿ ವಧೂ – ವರರಾಗಿ ಸಾಮೂಹಿಕ ವಿವಾಹವಾದರು. ದ.ಕ.ಜಿಲ್ಲೆಯಲ್ಲದೆ, ರಾಜ್ಯದ ತಮಿಳುನಾಡು ರಾಜ್ಯದ ವಧು-ವರರೂ ಈ ಸಾಮೂಹಿಕ ವಿವಾಹದಲ್ಲಿ ದಂಪತಿಯಾಗಿ ಹೊಸಜೀವನಕ್ಕೆ ಪಾದಾರ್ಪಣೆ ಮಾಡಿದರು. ಕೂಲಿ, ಬೇಸಾಯ, ವ್ಯಾಪಾರ, ಚಾಲಕ, ಖಾಸಗಿ ಉದ್ಯೋಗ, ಸರಕಾರಿ ಉದ್ಯೋಗ, ಮರದ ಕೆಲಸ, ಮೀನುಗಾರಿಕೆ ಮೊದಲಾದ ವೃತ್ತಿಯಲ್ಲಿ ತೊಡಗಿಕೊಂಡಿರುವ 123 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಲಾಯಿತು.

ಬುಧವಾರ ಬೆಳಗ್ಗಿನಿಂದಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಧು-ವರರಿಗೆ ಸೀರೆ, ರವಿಕೆ, ಧೋತಿ ಮತ್ತು ಶಾಲು ವಿತರಿಸಿದರು. ಸಂಜೆ 6.45ರ ಗೋಧೂಳಿ ಮುಹೂರ್ತದಲ್ಲಿ ಈ ಎಲ್ಲಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಾಹದ ಬಳಿಕ ನೂತನ ದಂಪತಿಗಳು ಶ್ರೀ ಮಂಜುನಾಥ ಸ್ವಾಮಿ ಹಾಗೂ ಪರಿವಾರದೇವರಗಳ ದರ್ಶನ ಮಾಡಿ ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನ ಸ್ವೀಕರಿಸಿದರು. 12,900ನೇ ಜೋಡಿಯಾದ ಗದಗದ ಪ್ರವೀಣ್ ಬನ್ನೂರು ಹಾಗೂ ಕವಿತಾ ಗಿಡ ಕೆಂಚಣ್ಣನವ‌ರ್ ಅವರನ್ನು ವಿಶಿಷ್ಟ ಜೋಡಿಯನ್ನಾಗಿ ಗುರುತಿಸಲಾಗಿದೆ. ಅಪಘಾತ ವೊಂದರಲ್ಲಿ ಕಾಲು ಕಳೆದುಕೊಂಡಿರುವ ವರ ಪ್ರವೀಣ್ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು, ತನ್ನ ಮಾವನ ಮಗಳಾದ ಕವಿತಾರನ್ನು ಮದುವೆಯಾಗಿದ್ದಾರೆ.

ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಯಿತು. ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿ ವರ್ಷಂಪ್ರತಿ ನಡೆಸಲಾಗುತ್ತದೆ. ಕಳೆದ ವರ್ಷದವರೆಗೆ 12,777 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here