9 ವರ್ಷಗಳ ಹಿಂದೆ ಬಂಟ್ವಾಳದ ಸಜಿಪಮೂಡ ಗ್ರಾಮದಲ್ಲಿ ನಡೆದಿದ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರು. ದಂಡ ವಿಧಿಸಿದೆ. 2015ರಲ್ಲಿ ತಂಡವೊಂದು ಮೊಹಮ್ಮದ್ ಮುಸ್ತಾಫ ಮತ್ತು ಮಹಮ್ಮದ್ ನಾಸೀರ್ ಎಂಬವರ ಮೇಲೆ ತಲವಾರ್ ನಡೆಸಿತ್ತು . ಇದರಲ್ಲಿ ಮಹಮ್ಮದ್ ನಾಸೀರ್ ಕೊಲೆಯಾಗಿದ್ದರು . ಕೋಮು ದ್ವೇಷದಿಂದ ಈ ಹತ್ಯೆ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (22), ಅಭಿ ಯಾನೆ ಅಭಿಜಿತ್ (24), ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (24), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (23) ಶಿಕ್ಷೆಗೆ ಒಳಗಾದವರು.
2015ರ ಆಗಸ್ಟ್ 6ರಂದು ರಾತ್ರಿ ಆಟೊದಲ್ಲಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ್ ಮತ್ತು ನಾಸೀರ್ ಅಲಿಯಾಸ್ ಮೊಹ್ಮದ್ ನಾಸೀರ್ ಅವರ ಮೇಲೆ ಅಪರಾಧಿಗಳು ತಲವಾರಿನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ನಾಸೀರ್ ಮಂಗಳೂರಿನ ಆಸ್ಪತ್ರೆಯಲ್ಲಿ ಮರುದಿನ ಮೃತಪಟ್ಟಿದ್ದರು.
ಮೊಹಮ್ಮದ್ ಮುಸ್ತಾಫ ಅವರು ತಮ್ಮ ಮಾವನ ಹೆಂಡತಿಯನ್ನು ಹೆರಿಗೆಗಾಗಿ ಬಂಟ್ವಾಳ ಆಸ್ಪತ್ರೆಗೆ ಆಟೊ ರಿಕ್ಷಾದಲ್ಲಿ ಬಿಟ್ಟು ರಾತ್ರಿ ಮನೆಗೆ ವಾಪಸ್ಸು ಆಗುತ್ತಿದ್ದರು. ತಮ್ಮ ಪತ್ನಿಯ ಮನೆಗೆ ಹೋಗುವ ಸಲುವಾಗಿ ನಾಸೀರ್ ಅವರು ಮೆಲ್ಕಾರ್ ಬಳಿ ಈ ಆಟೊ ಹತ್ತಿದ್ದರು. ಮೆಲ್ಕಾರ್ ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾ ಹೋಗುತ್ತಿರುವುದನ್ನು ಕಂಡ ಆರೋಪಿಗಳು, ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ರಾತ್ರಿ 10.45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ತಲುಪುತ್ತಿದ್ದಂತೆ ರಿಕ್ಷಾ ತಡೆದು ನಿಲ್ಲಿಸಿದ್ದಾರೆ. ಅದರಲ್ಲಿ ಇರುವ ಇಬ್ಬರು ಮುಸ್ಲಿಂರು ಎನ್ನುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ತಲವಾರಿನಿಂದ ದಾಳಿ ಮಾಡಿದ್ದರು.
ಮುಖ್ಯ ಆರೋಪಿ ವಿಜೇತ್ ಕುಮಾರ್ ತಲವಾರಿನಿಂದ ಮುಸ್ತಾಫ ಅವರ ಕೈ, ಎದೆಗೆ ಬಲವಾಗಿ ಕಡಿದಿದ್ದಾನೆ. 2ನೇ ಆರೋಪಿ ಕಿರಣ್ ಪೂಜಾರಿ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತಿದ್ದನಾಸೀರ್ ಗೆ ತಲವಾರಿನಿಂದ ಕಡಿದಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ನಾಸೀರ್ ಅಹಮ್ಮದ್ಆ.7ರಂದು ಮೃತಪಟ್ಟಿದ್ದಾರೆ. ಅಪರಾಧಿಗಳು ಕೃತ್ಯದ ವೇಳೆ ಧರಿಸಿದ್ದ ರಕ್ತಸಿಕ್ತ ಬಟ್ಟೆಗಳನ್ನು ಪಾಣೆಮಂಗಳೂರು ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರವನ್ನು ಮರೆಮಾಚಿಸಿದ್ದಾರೆ
ಇದಕ್ಕೂ ಮುನ್ನಾ ದಿನ 2015ರ ಆಗಸ್ಟ್ 5ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಆಲಬೆ ಎಂಬಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಮೇಲೆ ಮುಸ್ಲಿಂ ಸಮುದಾಯದ 4-5 ಯುವಕರು ಹಲ್ಲೆ ಮಾಡಿದ್ದರು. ಇದರಿಂದಾಗಿ ರೊಚ್ಚಿಗೆದ್ದಿದ್ದ ಈ ಇಬ್ಬರು, ತಮ್ಮ ಇನ್ನಿಬ್ಬರು ಮಿತ್ರರನ್ನು ಕರೆಯಿಸಿಕೊಂಡು, ಪಾಣೆ ಮಂಗಳೂರು ಬಳಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆ ದಾರಿಯಲ್ಲಿ ಸಿಕ್ಕ ಇವರನ್ನು ಕೊಲೆ ಮಾಡಿದರು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.
ನಾಲ್ವರೂ ಆರೋಪಿಗಳಿಗೆ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹1.20 ಲಕ್ಷವನ್ನು ಮೃತ ನಾಸೀರ್ ಅವರ ಪತ್ನಿ ರಹಮತ್ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿಯೂ ರಹಮತ್ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.
ತನಿಖಾಧಿಕಾರಿಯಾಗಿದ್ದ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 40 ದಾಖಲೆಗಳನ್ನು ಗುರುತಿಸಲಾಗಿದೆ. ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಟಾ ಮಾರ್ಗರೇಟ್ ಕ್ರಾಸ್ತ ವಾದ ಮಂಡಿಸಿದ್ದಾರೆ.