ಮಂಗಳೂರು: ಹೈಟೆನ್ಶನ್ ತಂತಿಗೆ ಏಣಿಯೊಂದು ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ಹೊರವಲಯದ ಕಾವೂರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಉತ್ತರ ಪ್ರದೇಶದ ವಾರಣಾಸಿ ನಿವಾಸಿ, ಕಾವೂರು ಪೆಟ್ರೋಲ್ ಪಂಪ್ವೊಂದರ ಸಿಬ್ಬಂದಿ ಸಂದೀಪ್ ಕುಮಾರ್ ವರ್ಮಾ (45) ಎಂದು ಗುರುತಿಸಲಾಗಿದೆ.
ಕಾವೂರು ಪೆಟ್ರೋಲ್ ಪಂಪ್ ನಲ್ಲಿ ಇಲೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಮೃತರು ಕೆಲಸ ನಿಮಿತ್ತ ಏಣಿ ಕೊಂಡೊಯ್ದು ವಿದ್ಯುತ್ ಕಂಬಕ್ಕೆ ಒರಗಿಸಿಟ್ಟಿದ್ದರು. ಈ ಸಂದರ್ಭ ಹೈಟೆನ್ಶನ್ ವಯರ್ನಿಂದ ವಿದ್ಯುತ್ ಪ್ರವಹಿಸಿ ಸಂದೀಪ್ ಕುಮಾರ್ ಕೆಳಗೆ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.