Home ತಾಜಾ ಸುದ್ದಿ ರಮೇಶ್ ಅರವಿಂದ್, ಅನುಶ್ರೀ ಸೇರಿ ಹಲವರ ವಿರುದ್ಧ ದೂರು: ಕಾರಣ ಇಲ್ಲಿದೆ!

ರಮೇಶ್ ಅರವಿಂದ್, ಅನುಶ್ರೀ ಸೇರಿ ಹಲವರ ವಿರುದ್ಧ ದೂರು: ಕಾರಣ ಇಲ್ಲಿದೆ!

0

ಬೆಂಗಳೂರು:  ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಬಳಸಲಾದ ಪದದಿಂದ ಶ್ರಮಿಕರಿಗೆ ಅಪಮಾನ ಮಾಡಿರುವ ಆರೋಪದ ಮೇಲೆ ರಿಯಾಲಿಟಿ ಶೋವೊಂದರ ವಿರುದ್ಧ ತುಮಕೂರು ಚಿಕ್ಕನಾಯಕನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ನಟಿ ಪ್ರೇಮಾ, ಸ್ಪರ್ಧಿ, ನಿರೂಪಕಿ ಅನುಶ್ರೀ ಹಾಗೂ ಇತರರ ವಿರುದ್ಧ ಚಿಕ್ಕನಾಯಕನಹಳ್ಳಿ ಪಟ್ಟಣದ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರು ದೃಶ್ಯವೊಂದರ ನಟನೆಯಲ್ಲಿ ‘ಮ್ಯಾಕನಿಕ್‌ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು…’ ಎಂಬ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ. ಮೆಕ್ಯಾನಿಕ್ ಸಮುದಾಯ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಹಗಲಿರುಳು ಬೆವರು ಸುರಿಸಿ ದುಡಿಯುತ್ತಾರೆ. ಹೀಗಾಗಿ ಶ್ರಮಿಕ ವರ್ಗದ ದುಡಿಮೆಯ ಬಗ್ಗೆ, ವೃತ್ತಿಯ ಬಗ್ಗೆ ಹೀಗೆ ತಿರಸ್ಕಾರದ, ಕುಹಕದ ಮತ್ತು ನಿಂದನಾತ್ಮಕ ಮಾತುಗಳು ಸರಿಯಲ್ಲ.

ಈ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್‌ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ರಿಯಾಲಿಟಿ ಶೋನ ಸ್ಪರ್ಧಿ ಹಾಗೂ ಆಕೆಯ ಮಾತುಗಳಿಗೆ ಉತ್ತೇಜನ ನೀಡಿದ ನಿರೂಪಕಿ, ನಿರ್ದೇಶಕರು, ನಿರ್ಮಾಪಕರು, ತೀರ್ಪುಗಾರರು ಹಾಗೂ ವಾಹಿನಿಯ ವಿರುದ್ಧ ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದೂರು ದಾಖಲಿಸಿದ್ದಾರೆ. ಶ್ರಮಿಕರನ್ನು ಅವಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ಪಟ್ಟಣದ ಠಾಣೆಯ ಮೂಲಕ ದೂರು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here