ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಚುನಾವಣಾ ಪ್ರಚಾರದ ಕೊನೆಯಲ್ಲಿ ಮಂಗಳೂರು ನಗರದ ಶಕ್ತಿನಗರದಲ್ಲಿ ಕಾಲ್ನಡಿಗೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಶಕ್ತಿನಗರದಿಂದ ನಾಲ್ಯಪದವು ಶತಮಾನೋತ್ಸವ ಶಾಲೆಯ ವರೆಗೂ ನೂರಾರು ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಬಂದು ಮತಯಾಚನೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಬ್ರಿಜೇಶ್ ಚೌಟ, ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದಾಗಿವೆ. ಎಸ್ಡಿಪಿಐ ಅವರಲ್ಲಿ ಅಭ್ಯರ್ಥಿ ಯಾರೆಂದು ಕೇಳಿದರೆ ಕಾಂಗ್ರೆಸ್, ಕಮ್ಯುನಿಸ್ಟರಲ್ಲಿ ಕೇಳಿದರೂ ಕಾಂಗ್ರೆಸ್ ಎಂದೇ ಹೇಳುತ್ತಾರೆ. ಕಾಂಗ್ರೆಸಿನವರಲ್ಲಿ ಕೇಳಿದರೆ ಅಭ್ಯರ್ಥಿ ಬಗ್ಗೆ ಸಂಶಯ ಇದೆ. ಅವರಲ್ಲೇ ಮನೆಯೊಂದು ಮೂರು ಬಾಗಿಲು ಎನ್ನುವ ರೀತಿ ಇದೆ. ಹೀಗಾಗಿ ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.
ನೀವು ನೈಜ ದೇಶಭಕ್ತರು, ದೇಶಕ್ಕಾಗಿ ಮತ
ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆ, ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿಯಿತ್ತ ಕ್ಯಾ.ಬ್ರಿಜೇಶ್ ಚೌಟ, ನಿಮಗೆ ರಾಷ್ಟ್ರಭಕ್ತಿ, ರಾಷ್ಟ್ರಸೇವೆಯ ಬಗ್ಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ನೀವೇ ನೈಜ ದೇಶ ಭಕ್ತರು. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಬಲತುಂಬಿದವರು ವೈದ್ಯರು ಮತ್ತು ಆರೋಗ್ಯ ಸಿಬಂದಿ. ನಿಮ್ಮನ್ನು ಕೊರೊನಾ ವಾರಿಯರ್ಸ್ ಎಂಬುದಾಗಿ ಕೊಂಡಾಡಿದ್ದರು ಎಂದರಲ್ಲದೆ, ಪ್ರಧಾನಿಯನ್ನು ಮೂರನೇ ಬಾರಿಗೆ ಗದ್ದುಗೆ ಏರಿಸುವಲ್ಲಿ ನಿಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.