ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಬಗ್ಗೆ ಬಂಟರ ಬ್ರಿಗೇಡ್ ಹೆಸರಲ್ಲಿ ಕರಪತ್ರ ಮುದ್ರಿಸಿ, ಆಕ್ಷೇಪಾರ್ಹ ವಿಚಾರಗಳನ್ನು ಬರೆದು ಜಾತಿ, ಜಾತಿಗಳ ನಡುವೆ ದ್ವೇಷ ಹಬ್ಬಿಸುವ ಯತ್ನ ನಡೆದಿದ್ದು ಬಿಜೆಪಿ ಕಾನೂನು ಪ್ರಕೋಷ್ಠದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಕರಪತ್ರದಲ್ಲಿ ಬ್ರಿಜೇಶ್ ಚೌಟರ ಭಾವಚಿತ್ರ ಬಳಸಿ ಆಕ್ಷೇಪಾರ್ಹ ವಿಚಾರಗಳನ್ನು ಮುದ್ರಿಸಿ, ದ್ವೇಷ ಹಬ್ಬಿಸುವ ಯತ್ನ ನಡೆದಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯೇ ಈ ಕೃತ್ಯವನ್ನು ಮಾಡಿದ್ದಾರೆ. ಈ ರೀತಿಯ ಕರಪತ್ರವನ್ನು ಮುದ್ರಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಜಾತಿಗಳ ನಡುವೆ ದ್ವೇಷ ಬಿತ್ತಿ ಅದರ ದುರ್ಲಾಭವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ದೇವಿಪ್ರಸಾದ್ ಸಾಮಾನಿ ಒತ್ತಾಯಿಸಿದ್ದಾರೆ.
ಬಂಟ ಬ್ರಿಗೇಡ್ ಎನ್ನುವ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಅಂತಹ ಸಂಸ್ಥೆ ಹೆಸರಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವುದು ಕಂಡುಬಂದಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂತಹ ವಿಚಾರಗಳನ್ನು ಪಸರಿಸಿ ಚುನಾವಣೆಯಲ್ಲಿ ಲಾಭ ಮಾಡಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಯಲ್ಲಿ ಒತ್ತಾಯಿಸಿದ್ದಾರೆ.