ಮಂಗಳೂರು: ಕಾಂಗ್ರೆಸ್ ಪಕ್ಷದ ಪ್ರಚಾರದ ಕರಪತ್ರದಲ್ಲಿ ಕಟೀಲು ಯಕ್ಷಗಾನ ಮೇಳದ ಕಲಾವಿದರೊಬ್ಬರ ವೇಷದ ಭಾವಚಿತ್ರ ಪ್ರಕಟಗೊಂಡಿದ್ದು, ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಕಟೀಲು ಮೇಳದ ಯಕ್ಷಗಾನ ಕಲಾವಿದ ಗಣೇಶ್ ಕನ್ನಡಿಕಟ್ಟೆ ಅವರು ತನ್ನ ಅನುಮತಿಯಿಲ್ಲದೆ ಭಾವಚಿತ್ರ ಪ್ರಕಟಿಸಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
18 ವರ್ಷಗಳಿಂದ ಕಟೀಲು ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿ ಸೇವೆ ಮಾಡಿಕೊಂಡಿದ್ದೇನೆ. ಎಪ್ರಿಲ್ 14ರಂದು ನನಗೆ ವಾಟ್ಸಪ್ ನಲ್ಲಿ ಫೋಟೋ ಬಂದಿದ್ದು ನೀವು ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಸೇರಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಟೀಲು ಮೇಳದ ವೇಷಧಾರಿಯಾಗಿ ಹಾಕಿದ್ದ ಯಕ್ಷಗಾನ ವೇಷದ ಫೋಟೋವನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ತನ್ನಲ್ಲಿ ಯಾವುದೇ ಅನುಮತಿ ಪಡೆದಿಲ್ಲ. ಯಕ್ಷಗಾನ ಮೇಳದಲ್ಲಿ ಗುರುತಿಸಿಕೊಂಡಿರುವುದರಿಂದ ನನಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಸದರಿ ಭಾವಚಿತ್ರವನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಪತ್ರದಲ್ಲಿ ಪ್ರಕಟವಾಗಿರುವುದರಿಂದ ನನ್ನ ಬಳಿ ಅಭಿಮಾನಿಗಳು ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿಸಿದ್ದೀರಾ ಎಂದು ಕೇಳುತ್ತಿದ್ದಾರೆ.
ನಾನು ಯಾವುದೇ ಪಕ್ಷದ ಪ್ರತಿನಿಧಿಯಾಗಿರುವುದಿಲ್ಲ. ಯಾವುದೇ ಪಕ್ಷದ ಪರವೂ ಪ್ರಚಾರ ಮಾಡಿರುವುದಿಲ್ಲ. ಕಾಂಗ್ರೆಸ್ ಪಕ್ಷದ ಕರಪತ್ರದಲ್ಲಿ ನನ್ನ ಭಾವಚಿತ್ರವು ಅನುಮತಿಯಿಲ್ಲದೆ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಪ್ರಯೋಜನವಾಗಿರುತ್ತದೆ. ಅಲ್ಲದೆ, ನನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಗಣೇಶ್ ಕನ್ನಡಿಕಟ್ಟೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.